ಇಲೆಕ್ಟ್ರಿಕ್ ಕಾರಿನಲ್ಲಿ 95 ಸಾವಿರ ಕಿ.ಮೀ. ಪ್ರಯಾಣ
ನೆದರ್‌ಲ್ಯಾಂಡ್ ನಿವಾಸಿಯಿಂದ ವಿಶ್ವದಾಖಲೆ

ಸಿಡ್ನಿ,ಎ.7: ನೆದರ್‌ಲ್ಯಾಂಡ್‌ನ ವ್ಯಕ್ತಿಯೊಬ್ಬರು ವಿದ್ಯುತ್‌ಚಾಲಿತ ಕಾರಿನಲ್ಲಿ ದಾಖಲೆಯ 95 ಸಾವಿರ ಕಿ.ಮೀ. ಪ್ರಯಾಣವನ್ನು ರವಿವಾರ ಪೂರ್ಣಗೊಳಿಸಿದ್ದಾರೆ. ವಿದ್ಯುತ್‌ಚಾಲಿತ ವಾಹನಗಳ ಕಾರ್ಯಕ್ಷಮತೆಯನ್ನು ಸಾಬೀತುಪಡಿಸುವ ಪ್ರಯತ್ನವಾಗಿ ಈ ಮಹಾಪಯಣವನ್ನು ತಾನು ನಡೆಸಿರುವುದಾಗಿ ಅವರು ಹೇಳಿಕೊಂಡಿದ್ದಾರೆ.
'ಬ್ಲೂ ಬ್ಯಾಂಡಿಟ್' ಎಂದು ಹೆಸರಿಡಲಾದ ಈ ವಿದ್ಯುತ್ ಚಾಲಿತ ಕಾರಿನಲ್ಲಿ, ಹಾಲೆಂಡ್ ಪ್ರಜೆ ವಿಬಿ ವಾಕರ್ ಭಾರತ ಸೇರಿದಂತೆ ಸುಮಾರು 33 ದೇಶಗಳಿಗೆ ಪ್ರಯಾಣಿಸಿದ್ದು, ಇಂದು ಅವರು ಆಸ್ಟ್ರೇಲಿಯದ ಸಿಡ್ನಿಯಲ್ಲಿ ತನ್ನ ಪ್ರಯಾಣವನ್ನು ಪೂರ್ಣಗೊಳಿಸಿದರು. ವಿದ್ಯುತ್ ಚಾಲಿತ ಕಾರೊಂದು ಇಷ್ಟೊಂದು ಸುದೀರ್ಘ ದೂರವನ್ನು ಕ್ರಮಿಸಿರುವುದು ಇದು ಮೊದಲ ಸಲವಾಗಿದೆ.
ನೆದರ್‌ಲ್ಯಾಂಡ್‌ನಿಂದ ಆಸ್ಟ್ರೇಲಿಯದವರೆಗೆ ಪ್ರಯಾಣಿಸಲು ವಿಬಿವಾಕರ್ ಅವರಿಗೆ ಸುಮಾರು ಮೂರು ವರ್ಷಗಳು ಬೇಕಾದವು. ಜಗತ್ತಿನಾದ್ಯಂತ ಸಾರ್ವಜನಿಕ ದೇಣಿಗೆಯ ಮೂಲಕ ಅವರು ಸಾಹಸಯಾತ್ರೆಯನ್ನು ನಡೆಸಿದ್ದಾರೆ.
ಟರ್ಕಿ, ಇರಾನ್, ಭಾರತ, ಮ್ಯಾನ್ಮಾರ್, ಮಲೇಷ್ಯ ಹಾಗೂ ಇಂಡೊನೇಶ್ಯ ಸೇರಿದಂತೆ ವೈವಿಧ್ಯಮಯ ಪರಿಸರದ ಹಾಗೂ ಭೌಗೋಳಿಕ ವಾತಾವರಣದ ದೇಶಗಳಲ್ಲಿ ವಾಕರ್ ಪ್ರಯಾಣಿಸಿದರು. ''ವಿದ್ಯುತ್ ಚಾಲಿತ ವಾಹನಗಳ ಬಗ್ಗೆ ಜನರ ಅಭಿಪ್ರಾವನ್ನು ಬದಲಾಯಿಸಲು ನಾನು ಬಯಸಿದ್ದೇನೆ'' ವಾಕರ್, ತನ್ನ ಯಾತ್ರೆಯನ್ನು ಪೂರ್ಣಗೊಳಿಸಿದ ಸಂಭ್ರಮದಲ್ಲಿದ್ದ ವಾಕರ್ ತಿಳಿಸಿದರು.
''ಒಬ್ಬ ವ್ಯಕ್ತಿಗೆ ವಿದ್ಯುತ್ ಚಾಲಿತ ಕಾರಿನ ಮೂಲಕ ಜಗತ್ತಿನ ಒಂದು ಬದಿಗೆ ಪ್ರಯಾಣಿಸಲು ಸಾಧ್ಯವಾಗುವುದಾದರೆ, ಖಂಡಿತವಾಗಿಯೂ ಇವಿ (ಇಲೆಕ್ಟ್ರಿಕ್‌ವಾಹನಗಳು)ಗಳು, ದಿನಬಳಕೆಗೆ ಯೋಗ್ಯವಾದವುಗಳಾಗಿವೆ'' ಎಂದರು.
ವಿಬಿ ವಾಕರ್ ಅವರು ತನ್ನ ಪೆಟ್ರೋಲ್ ಚಾಲಿತ ಕಾರಿನಲ್ಲಿ ಕೆಲವು ಮಾರ್ಪಾಡುಗಳನ್ನು ಮಾಡಿ, ಅದನ್ನು ವಿದ್ಯುತ್ ಚಾಲಿತವಾಹನವಾಗಿ ರೂಪಿಸಿದ್ದರು. ಇಷ್ಟು ದೂರದ ಪ್ರಯಾಣವನ್ನು ಪೆಟ್ರೋಲ್ ಚಾಲಿತ ಕಾರಿನಲ್ಲಿ ಮಾಡುವುದಾದರೆ ಅದಕ್ಕೆ 6785 ಲೀಟರ್ ಪೆಟ್ರೋಲ್ ಬೇಕಾಗುತ್ತಿತ್ತು ಎಂದವರು ಹೇಳಿದ್ದಾರೆ. ತನ್ನ ಕಾರು ಒಂದು ಬಾರಿ ವಿದ್ಯುತ್ ಚಾರ್ಜ್ ಮಾಡಿದರೆ, ಅದು 200 ಕಿ.ಮೀ.ವರೆಗೆ ಪ್ರಯಾಣಿಸುವ ಸಾಮರ್ಥ್ಯ ಹೊಂದಿದೆಯೆಂದು ವಿಬಿ ವಾಕರ್ ತಿಳಿಸಿದರು.







