ದಲಿತರ ವಿರುದ್ಧದ ದೌರ್ಜನ್ಯ ನೆನಪಿಸಲು ಅಮಿತ್ ಶಾ ವಿರುದ್ಧ ದಲಿತ ವ್ಯಕ್ತಿಯ ಸ್ಪರ್ಧೆ
ಲೋಕಸಭಾ ಚುನಾವಣೆ

ಹೊಸದಿಲ್ಲಿ, ಎ. 7: ಲೋಕಸಭಾ ಚುನಾವಣೆಯ ಕಾವು ಹೆಚ್ಚುತ್ತಿರುವಂತೆ, ಹಿಂಸಾಚಾರದಲ್ಲಿ ಬಲಿಪಶುಗಳಾದ ದಲಿತರ ನೆನಪಿಗಾಗಿ ಸ್ವರ್ಧಿಸುವ ನಿರ್ಧಾರವನ್ನು ಇಬ್ಬರು ದಲಿತ ಯುವಕರು ತೆಗೆದುಕೊಂಡಿದ್ದಾರೆ.
2012ರಲ್ಲಿ ಗುಜರಾತ್‌ನ ಥಂಗಧ್‌ನಲ್ಲಿ ದಲಿತರು ಹಾಗೂ ಒಬಿಸಿ ಭರ್ವಾಡ್ ಸಮುದಾಯಗಳ ಸದಸ್ಯರ ನಡುವೆ ನಡೆದ ಘರ್ಷಣೆಯ ಸಂದರ್ಭ ಪೊಲೀಸರು ಹಾರಿಸಿದ ಗುಂಡಿಗೆ ಬಲಿಯಾದ ಮೂವರು ಯುವಕರಲ್ಲಿ ವೆಲ್ಚಿ ರಾಥೋಡ್ ಅವರ ಪುತ್ರ ಮೆಹುಲ್ ಕೂಡ ಸೇರಿದ್ದರು. ತನ್ನ ಪುತ್ರನ ನೆನಪಿನಲ್ಲಿ ವೆಲ್ಜಿ ರಾಥೋಡ್ ಈಗ ಗಾಂಧಿನಗರ ಲೋಕಸಭಾ ಕ್ಷೇತ್ರದಲ್ಲಿ ಕಣಕ್ಕಿಳಿದಿದ್ದಾರೆ. ಅವರು ಬಿಜೆಪಿಯ ಅಮಿತ್ ಶಾ ವಿರುದ್ಧ ಸ್ಪರ್ಧಿಸಲಿದ್ದಾರೆ.
ರಾಥೋಡ್ ಅವರು ಸ್ವತಂತ್ರ ಅಭ್ಯರ್ಥಿಯಾಗಿ ಗುರುವಾರ ನಾಮಪತ್ರ ಸಲ್ಲಿಸಿದ್ದಾರೆ.
‘‘ಪೊಲೀಸರಿಂದ ಬಲಿಪಶುಗಳಾದವರ ಕುಟುಂಬದವರಿಗೆ ಅವರ (ಅಮಿತ್ ಶಾ) ನೇತೃತ್ವದ ಸರಕಾರ ನ್ಯಾಯ ನೀಡಲು ವಿಳಂಬಿಸುತ್ತಿರುವುದರ ಬಗ್ಗೆ ಸಂದೇಶ ರವಾನಿಸಲು ನಾನು ಬಯಸುತ್ತೇನೆ’’ ಎಂದು ರಾಥೋಡ್ ಹೇಳಿದ್ದಾರೆ.
ಆಂಧ್ರಪ್ರದೇಶದ ಪರ್ಚೂರ್ ಲೋಕಸಭಾ ಕ್ಷೇತ್ರದಿಂದ ಬಿಎಸ್ಪಿಯಿಂದ ಪೆಡಪುಡಿ ವಿಜಯ ಕುಮಾರ್ ಅವರು ರೋಹಿತ್ ವೇಮುಲ ಅವರ ನೆನಪಿಗೆ ಸ್ಪರ್ಧಿಸುತ್ತಿದ್ದಾರೆ. ರೋಹಿತ್ ವೇಮುಲ ಅವರೊಂದಿಗೆ ಹೈದರಾಬಾದ್ ವಿಶ್ವವಿದ್ಯಾನಿಲಯದಿಂದ ಉಚ್ಛಾಟನೆಗೆ ಒಳಗಾದ ನಾಲ್ಕು ಮಂದಿ ವಿದ್ಯಾರ್ಥಿಗಳಲ್ಲಿ ಇವರು ಕೂಡ ಒಬ್ಬರು. ರೋಹಿತ್ ವೇಮುಲ ಆತ್ಮಹತ್ಯೆ ಮಾಡಿಕೊಂಡ ಹಿನ್ನೆಲೆಯಲ್ಲಿ ನಡೆಸಲಾದ ‘ಜಸ್ಟಿಸ್ ಫಾರ್ ರೋಹಿತ್’ ಅಭಿಯಾನದ ನಾಯಕರಲ್ಲಿ ಕುಮಾರ್ ಕೂಡ ಓರ್ವ ನಾಯಕ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಕುಮಾರ್, ‘‘ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರು ಮೀಸಲು ಕ್ಷೇತ್ರದಿಂದ ಮಾತ್ರ ಸ್ಪರ್ಧಿಸಬೇಕು, ಸಾಮಾನ್ಯ ಕ್ಷೇತ್ರ ಮೇಲ್ಜಾತಿಗೆ ಮೀಸಲು ಎಂಬ ಗ್ರಹಿಕೆ ಇದೆ. ಇದು ಜಾತಿ ತಾರತಮ್ಯವನ್ನು ಇನ್ನಷ್ಟು ತೀವ್ರಗೊಳಿಸುತ್ತಿದೆ. ನಮ್ಮ ಗುರಿ ಜಾತಿ ವ್ಯವಸ್ಥೆಯ ನಿರ್ಮೂಲನೆ ಮಾಡುವುದು. ದಲಿತರು ಹಾಗೂ ಪರಿಶಿಷ್ಟ ಪಂಗಡದವರು ಮೀಸಲು ಅಥವಾ ಸಾಮಾನ್ಯ ಎಂದು ಪರಿಗಣಿಸದೆ ಎಲ್ಲ ಕ್ಷೇತ್ರದಲ್ಲೂ ಸ್ಪರ್ಧಿಸಬೇಕು’’ ಎಂದಿದ್ದಾರೆ.







