ಮುಖ್ಯಮಂತ್ರಿಯನ್ನು ಮನೆಗೆ ಊಟಕ್ಕೆ ಕರೆದೊಯ್ದ ಪ್ರಮೋದ್‌ಗೆ ಮೀನುಗಾರರ ಮನೆಗಳು ಕಾಣಲಿಲ್ಲವೇ ?: ರಘುಪತಿ ಭಟ್ ಪ್ರಶ್ನೆ

ಉಡುಪಿ, ಎ. 8: ಉಡುಪಿಗೆ ರವಿವಾರ ಆಗಮಿಸಿದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ತನ್ನ ಮನೆಗೆ ಊಟಕ್ಕೆ ಕರೆದುಕೊಂಡು ಹೋದ ಮೈತ್ರಿ ಅಭ್ಯರ್ಥಿ ಪ್ರಮೋದ್ ಮಧ್ವರಾಜ್‌ಗೆ ಅಲ್ಲೇ ಒಂದು ಕಿ.ಮೀ. ದೂರದಲ್ಲಿರುವ ನಾಪತ್ತೆಯಾದ ಎರಡು ಮೀನುಗಾರರ ಕುಟುಂಬಗಳ ಮನೆಗಳು ಯಾಕೆ ಕಾಣಲಿಲ್ಲ ಎಂದು ಉಡುಪಿ ಶಾಸಕ ಕೆ.ರಘುಪತಿ ಭಟ್ ಪ್ರಶ್ನಿಸಿದ್ದಾರೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಪತ್ತೆಯಾದ ಮೀನುಗಾರರ ಮನೆಗಳಿಗೆ ಸಚಿವೆ ನಿರ್ಮಲಾ ಸೀತಾರಾಮನ್ ಭೇಟಿ ಕುರಿತು ಟೀಕೆ ಮಾಡಿದ ಪ್ರಮೋದ್, ಕಾರ್ಕಳದಲ್ಲಿ ಸಿಎಂ ಕರೆದ ವಿವಿಧ ಸಮುದಾಯದವರ ಸಭೆಗೆ ಈ ಕುಟುಂಬಗಳನ್ನು ಯಾಕೆ ಕರೆದಿಲ್ಲ. ಮುಖ್ಯ ಮಂತ್ರಿಯನ್ನು ತನ್ನ ಮನೆಗೆ ಕರೆದುಕೊಂಡು ಹೋಗುವ ಬದಲು ಮೀನುಗಾರರ ಕುಟುಂಬಗಳನ್ನು ಭೇಟಿ ಮಾಡಿಸಬಹುದಿತ್ತು ಎಂದರು.
ಸುವರ್ಣ ತ್ರಿಭುಜ ಬೋಟಿಗೆ ನೌಕಪಡೆಯ ಹಡಗು ಢಿಕ್ಕಿ ಹೊಡೆದಿರುವ ಬಗ್ಗೆ ಈಗ ಆರೋಪ ಮಾಡಲಾಗುತ್ತಿದೆ. ಆದರೆ ಇವರದ್ದೆ ಸರಕಾರದ ಅಧಿಕಾರಿ ಗಳು ಈವರೆಗೆ ನೌಕಪಡೆಯ ಹಿರಿಯ ಅಧಿಕಾರಿಗಳ ಜೊತೆ ಯಾಕೆ ಅಧಿಕೃತ ಸಭೆ ಕರೆದು ಚರ್ಚಿಸಿಲ್ಲ. ಈಗ ಇವರು ಚುನಾವಣಾ ಸಂದರ್ಭದಲ್ಲಿ ಕೇಂದ್ರ ಸರಕಾರದ ಮೇಲೆ ಗೂಬೆಕೂರಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಅವರು ಟೀಕಿಸಿದರು.
ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿಸುವ ಉದ್ದೇಶ ದಿಂದ ಮೋದಿಗೆ ಮತ ಕೊಡಿ ಎಂಬುದಾಗಿ ನಮ್ಮ ಅಭ್ಯರ್ಥಿ ಶೋಭಾ ಕರಂದ್ಲಾಜೆ ಕೇಳುತ್ತಿದ್ದಾರೆ. ಆದರೆ ಪ್ರಮೋದ್ ಮಧ್ವರಾಜ್ ಜೆಡಿಎಸ್ ಸೇರಿ ರುವುದರಿಂದ ರಾಹುಲ್ ಗಾಂಧಿಗೆ ಮತ ಕೊಡಿ ಎಂದು ಹೇಳುವ ಧೈರ್ಯ ಇಲ್ಲ. ಇತ್ತ ದೇವೇಗೌಡರಿಗೆ ಮತ ಕೊಡಿ ಎಂದು ಕೇಳಿದರೆ ನಾಳೆಯಿಂದ ಇವರ ಜೊತೆ ಕಾಂಗ್ರೆಸ್ ಕಾರ್ಯಕರ್ತರ ಇರಲ್ಲ. ಹೀಗೆ ಪ್ರಮೋದ್ ಸಂದಿಗ್ಧ ಪರಿಸ್ಥಿತಿಯಲ್ಲಿ ಇದ್ದಾರೆ. ಈ ಬಾರಿ ಶೋಭಾ ಕರಂದ್ಲಾಜೆ 2-3 ಲಕ್ಷ ಮತಗಳ ಅಂತರದಲ್ಲಿ ಜಯಗಳಿಸಲಿದ್ದಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ನಾನು ಚೌಕಿದಾರ್ ಎಂಬ ಸ್ಟಿಕ್ಕರ್‌ಗಳನ್ನು ಕಾರುಗಳಿಗೆ ಅಂಟಿಸಲು ಯಾಕೆ ಆಕ್ಷೇಪ ಮಾಡಲಾಗುತ್ತಿದೆ ಎಂಬುದು ಗೊತ್ತಾಗುತ್ತಿಲ್ಲ. ಸಂಚಾರ ನಿಯಮಗಳ ಪ್ರಕಾರ ವಾಹನದ ಗಾಜುಗಳಿಗೆ ಸ್ಟಿಕ್ಕರ್ ಅಂಟಿಸುವುದು ತಪ್ಪಾದರೆ ಎಲ್ಲ ವಾಹನಗಳ ಸ್ಟಿಕ್ಕರ್‌ಗಳನ್ನು ಚುನಾವಣಾ ಆಯೋಗ ತೆರವುಗೊಳಿಸಲಿ. ಸದ್ಯ ನಮ್ಮ ಕಾರ್ಯಕರ್ತರು ಗಾಜುಗಳಲ್ಲಿನ ಸ್ಟಿಕ್ಕರ್ ತೆಗೆದು ವಾಹನದ ಬಾಡಿಗಳಿಗೆ ಅಂಟಿಸುತ್ತಿದ್ದಾರೆ ಎಂದು ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ಮಹೇಶ್ ಠಾಕೂರ್, ಪ್ರಭಾಕರ ಪೂಜಾರಿ, ಶ್ರೀಶ ನಾಯಕ್, ಕಪ್ಪೆಟ್ಟು ಪ್ರವೀಣ್ ಶೆಟ್ಟಿ, ದೀಪ್ ಮೊದಲಾದವರು ಉಪಸ್ಥಿತರಿದ್ದರು.
ಮರಳು ಸಮಸ್ಯೆಗೆ ಪ್ರಮೋದ್ ಕಾರಣ
ಪ್ರಮೋದ್ ಮಧ್ವರಾಜ್ ಸಂಸದರಾಗಲೀ ಅಥವಾ ಆಗದಿರಲಿ ಜಿಲ್ಲೆಯಲ್ಲಿ ಶೀಘ್ರವೇ ಮರಳು ಸುಲಲಿತವಾಗಿ ದೊರೆಯಲಿದೆ. ಈ ಸಂಬಂಧ ಎಲ್ಲ ಸಮಸ್ಯೆ ಗಳನ್ನು ಈಗಾಗಲೇ ಪರಿಹರಿಸಲಾಗಿದೆ. ಜಿಲ್ಲೆಯಲ್ಲಿನ ಮರಳು ಸಮಸ್ಯೆಗೆ ಪ್ರಮೋದ್ ಮಧ್ವರಾಜ್ ಅವರೇ ಕಾರಣ. ಇದರಲ್ಲಿ ಕೇಂದ್ರ ಸರಕಾರದ ಯಾವುದೇ ತಪ್ಪು ಇಲ್ಲ ಎಂದು ರಘುಪತಿ ಭಟ್ ಸ್ಪಷ್ಟಪಡಿಸಿದರು.
ಬಜೆಟ್‌ನಲ್ಲಿ ಕರವಾಳಿಗೆ ಹಾಗೂ ಮೀನುಗಾರರಿಗೆ ಯಾವುದೇ ಅನುದಾನ ನೀಡದ ಮುಖ್ಯಮಂತ್ರಿ, ಈಗ ಚುನಾವಣೆ ಸಂದರ್ಭದಲ್ಲಿ ಕರಾವಳಿಯ ಬಗ್ಗೆ ಮೆಚ್ಚುಗೆ ಮಾತನಾಡುತ್ತಿದ್ದಾರೆ. ಆಗ ಅವಕಾಶ ಇದ್ದರೂ ಅವರು ನಿರ್ಲಕ್ಷ ಮಾಡಿದ್ದಾರೆ. ಮುಖ್ಯಮಂತ್ರಿಗಳು ಎಲ್ಲ ಸಮುದಾಯದ ಮುಖಂಡರ ಸಭೆ ಕರೆದು ಭರವಸೆಗಳ ಮಹಾಪೂರವೇ ನೀಡುತ್ತಿದ್ದಾರೆ. ಲೋಕಸಭಾ ಚುನಾವಣೆ ಫಲಿತಾಂಶ ಬಂದ 24 ಗಂಟೆಗಳಲ್ಲಿ ಸಮ್ಮಿಶ್ರ ಸರಕಾರ ಪತನ ಆಗಲಿರುವುದ ರಿಂದ ಕುಮಾರಸ್ವಾಮಿ ಈಗ ಜನರಿಗೆ ಸುಳ್ಳು ಭರವಸೆಗಳನ್ನು ನೀಡುತ್ತಿದ್ದಾರೆ ಎಂದು ದೂರಿದರು.







