ಹನೂರು: ವಿಶ್ವ ಆರೋಗ್ಯ ದಿನಾಚರಣೆ ಅಂಗವಾಗಿ ಕಿರು ನಾಟಕ ಪ್ರದರ್ಶನ

ಹನೂರು: ಸಮೀಪದ ಕಾಮಗೆರೆ ಹೋಲಿಕ್ರಾಸ್ ಆಸ್ಪತ್ರೆಯಲ್ಲಿ ವಿಶ್ವ ಆರೋಗ್ಯ ದಿನಾಚರಣೆ ಅಂಗವಾಗಿ ಹೋಲಿಕ್ರಾಸ್ ನರ್ಸಿಂಗ್ ಸ್ಕೂಲ್ ಪ್ರಶಿಕ್ಷಣಾರ್ಥಿಗಳು ಆರೋಗ್ಯದ ಮಹತ್ವವನ್ನು ಸಾರುವ ವಿಷಯಗಳನ್ನೊಳಗೊಂಡ ಕಿರು ನಾಟಕ ಪ್ರದರ್ಶನ ಹಾಗೂ ಗಾಯನ, ವಿಷಯ ಮಂಡನೆ ಸೇರಿದಂತೆ ಅರ್ಥಪೂರ್ಣ ಆರೋಗ್ಯದ ಅರಿವನ್ನು ಮೂಡಿಸುವ ಕಾರ್ಯಕ್ರಮವನ್ನು ಏರ್ಪಡಿಸಿದ್ದರು.
ಕಾರ್ಯಕ್ರಮದ ಅಂಗವಾಗಿ ಪ್ರಶಿಕ್ಷಣಾರ್ಥಿಗಳು ಎರಡು ನಾಟಕದ ಮೂಲಕ ಆರೋಗ್ಯದ ಅರಿವನ್ನು ಸಾರಿದರು. ನಂತರ ವಿಶ್ವ ಸಂಸ್ಥೆ ಆರೋಗ್ಯಯುತವಾದ ಸಮಾಜ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಸಾರ್ವತ್ರಿಕ ಆರೋಗ್ಯ ರಕ್ಷಣೆಗೆ ಕೈಗೊಂಡಿರುವ ಅತ್ಯಂತ ಮಹತ್ವಪೂರ್ಣ ಕಾರ್ಯಕ್ರಮಗಳು ಸೇರಿದಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಾರ್ವಜನಿಕರ ಆರೋಗ್ಯ ಸುಧಾರಣೆ ಬಗ್ಗೆ ಕೈಗೊಂಡಿರುವ ಕಾರ್ಯಕ್ರಮಗಳು ಅದರ ಅನುಕೂಲಗಳು ಹಾಗೂ ಸಾಂಕ್ರಾಮಿಕ ರೋಗಗಳ ಬಗ್ಗೆ ಚಿತ್ರಪಟ ಹಾಗೂ ಮಿಂಚು ಪಟ್ಟಿಗಳ ಮೂಲಕ ಸುವಿಸ್ತಾರವಾಗಿ ವಿಷಯವನ್ನು ಮಂಡಿಸಲಾಯಿತು.
ಕಾರ್ಯಕ್ರಮದ ಕೊನೆಯ ಘಟ್ಟವಾಗಿ ಆರೋಗ್ಯದ ಮಹತ್ವವನ್ನು ಸಾರುವ ‘ನಮ್ಮಆರೋಗ್ಯವು ನಮ್ಮಲ್ಲಿದೆ ದೇಶದ ಅಭಿವೃದ್ಧಿಯೂ ನಮ್ಮಿಂದಲೇ’ ಎಂಬ ಗಾಯನವನ್ನು ಪ್ರಸ್ತುತಪಡಿಸಿ ನೆರೆದಿದ್ದವರನ್ನು ಮನರಂಜಿಸಿದರು.
ಈ ಸಂದರ್ಭದಲ್ಲಿ ಹೋಲಿಕ್ರಾಸ್ ಆಸ್ಪತ್ರೆಯ ಆಡಳಿತಾಧಿಕಾರಿ ಸಿಸ್ಟರ್ ಕ್ಯಾಥಲೀನ್, ಸಿಸ್ಟರ್ ರೆಜಿಜಾನ್, ವೈದ್ಯಾಧಿಕಾರಿಗಳಾದ ಡಾ. ಡೀನಾ, ಡಾ.ಬಸವರಾಜು, ಡಾ.ಕುಮಾರ್, ಡಾ.ಸುನೀಲ್ ಕುಮಾರ್, ಡಾ.ಮಲ್ಲಿಕಾರ್ಜುನಾರಾಧ್ಯ, ಡಾ.ಪ್ರಶಾಂತ್ ಚೌಧರಿ, ಹಾಗೂ ನರ್ಸಿಂಗ್ ಸ್ಕೂಲ್ ಪ್ರಾಂಶುಪಾಲರಾದ ಸಿಸ್ಟರ್ ಲೂಸಿಜಾನ್, ನರ್ಸಿಂಗ್ ಸ್ಕೂಲ್‍ನ ಎಲ್ಲಾ ಬೋಧಕ ವರ್ಗದವರು ಮತ್ತು ವಿದ್ಯಾರ್ಥಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.








