ಬಿಜೆಪಿ ಪ್ರಣಾಳಿಕೆ ಸುಳ್ಳಿನ ಕಂತೆ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಂಗಳೂರು, ಎ. 8: ಬಿಜೆಪಿ ಐದು ವರ್ಷಗಳ ಕಾಲ ಯಾವುದೇ ಅಭಿವೃದ್ಧಿಯನ್ನು ಮಾಡದ ಬಿಜೆಪಿ ಇದೀಗ ಪ್ರಣಾಳಿಕೆ ಮೂಲಕ ಹೊಸದಾಗಿ ಸುಳ್ಳು ಹೇಳುತ್ತಿದೆ. ಬಿಜೆಪಿ ಪ್ರಣಾಳಿಕೆ ಒಂದು ಸುಳ್ಳಿನ ಕಂತೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಟೀಕಿಸಿದ್ದಾರೆ.
ಸೋಮವಾರ ಕೇಂದ್ರ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿ ಪರ ಪ್ರಚಾರ ನಡೆಸುತ್ತಿದ್ದ ವೇಳೆ ಮಾಧ್ಯಮ ಪ್ರತಿನಿಧಿಗಳ ಜತೆಗೆ ಮಾತನಾಡಿದ ಅವರು, ಬಿಜೆಪಿ ಪ್ರಣಾಳಿಕೆಗೆ ಹೆಚ್ಚಿನ ಮಹತ್ವ ನೀಡುವ ಅಗತ್ಯವಿಲ್ಲ. ಬಿಜೆಪಿ ರಾಜಕಾರಣಕ್ಕಾಗಿ ರಾಮಮಂದಿರ ಪ್ರಸ್ತಾಪಿಸಿದ್ದು, ಮುಂದೆಯೂ ಅವರು ಮಂದಿರ ನಿರ್ಮಾಣ ಮಾಡುವುದಿಲ್ಲ ಎಂದರು.
ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮಾತನಾಡಿ, ಮೋದಿ ಚುನಾವಣೆಗೆ ಮೊದಲು ನೀಡಿದ್ದ ಭರವಸೆಗಳನ್ನೇ ಈಡೇರಿಸಿಲ್ಲ. ಇದೀಗ ಮತ್ತೆ ರಾಮಮಂದಿರ, ಕಲಂ 370, ಏಕರೂಪ ನಾಗರಿಕ ಸಂಹಿತೆ ವಿಚಾರಗಳನ್ನು ಪ್ರಸ್ತಾಪಿಸಿದೆ ಎಂದು ವಾಗ್ದಾಳಿ ನಡೆಸಿದರು.
ಮೂವತ್ತು ವರ್ಷಗಳಿಂದ ಇದೇ ವಿಚಾರಗಳು ಬಿಜೆಪಿ ಪ್ರಣಾಳಿಕೆಯಲ್ಲಿದ್ದು. ಇದೀಗ ಅದೇ ವಿಚಾರಗಳನ್ನು ಜನರ ಮುಂದಿಟ್ಟಿದ್ದಾರೆ. ಮೋದಿ ಹೇಳಿದ ಒಂದೇ ಒಂದೂ ಭರವಸೆಯನ್ನು ಈಡೇರಿಸಿಲ್ಲ. ಇದೀಗ ಬಿಡುಗಡೆ ಮಾಡಿರುವ ಪ್ರಣಾಳಿಕೆಗೆ ಮಹತ್ವವೇ ಇಲ್ಲ ಎಂದು ಹೇಳಿದರು.
ಆಹಾರ ಸಚಿವ ಝಮೀರ್ ಅಹ್ಮದ್ ಖಾನ್, ಬೃಹತ್ ಮತ್ತು ಮಧ್ಯಮ ಕೈಗಾರಿಕಾ, ಐಟಿ-ಬಿಟಿ ಸಚಿವ ಕೆ.ಜೆ.ಜಾರ್ಜ್, ಕೇಂದ್ರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಿಝ್ವನ್ ಅರ್ಶದ್ ಸೇರಿದಂತೆ ಸ್ಥಳೀಯ ಮುಖಂಡರು ರೋಡ್ ಶೋನಲ್ಲಿ ಪಾಲ್ಗೊಂಡಿದ್ದರು.
ತುಮಕೂರು ಲೋಕಸಭೆ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿ, ಮಾಜಿ ಪ್ರಧಾನಿ ದೇವೇಗೌಡ ಪರ ಒಟ್ಟಾಗಿ ಪ್ರಚಾರ ನಡೆಸುತ್ತೇವೆ. ಹೀಗಾಗಿ ಸಿದ್ಧತೆ ಸಂಬಂಧ ಸಭೆ ನಡೆಸಿದ್ದು, ಅದು ಪ್ರತ್ಯೇಕವಾದ ಸಭೆಯಲ್ಲ. ಮಾಜಿ ಶಾಸಕ ಕೆ.ಎನ್.ರಾಜಣ್ಣ ಮೈತ್ರಿ ಅಭ್ಯರ್ಥಿ ಪರ ಪ್ರಚಾರ ಮಾಡಲಿದ್ದಾರೆ’
-ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ







