ಬೆಂಗಳೂರಿನ ಪೂರ್ಣಪ್ರಜ್ಞ ವಿದ್ಯಾಪೀಠದಲ್ಲಿ ‘ರಾಜಕೀಯ’ ಗದ್ದಲ: ಪೇಜಾವರಶ್ರೀ ಸ್ಪಷ್ಟನೆ

ಉಡುಪಿ, ಎ.8: ಪೇಜಾವರ ಮಠಕ್ಕೆ ಸೇರಿದ ಬೆಂಗಳೂರಿನಲ್ಲಿರುವ ಪೂರ್ಣಪ್ರಜ್ಞ ವಿದ್ಯಾಪೀಠದಲ್ಲಿ ಯುಗಾದಿಯ ದಿನವಾದ ಎ.6ರಂದು ನಡೆದ ಘಟನೆಗೆ ಸಂಬಂಧಿಸಿದಂತೆ ಪೇಜಾವರ ಮಠಾಧೀಶರಾದ ಶ್ರೀವಿಶ್ವೇಶತೀರ್ಥರು ತಮ್ಮ ಸ್ಪಷ್ಟನೆಯನ್ನು ನೀಡಿದ್ದಾರೆ.
‘ಯುಗಾದಿ ಹಬ್ಬದ ದಿನದಂದು ಪೂರ್ಣಪ್ರಜ್ಞ ವಿದ್ಯಾಪೀಠದಲ್ಲಿ ನಮ್ಮ ನೇತೃತ್ವದಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ರಾಜಕೀಯ ಪಕ್ಷದ ಕೆಲ ಕಾರ್ಯಕರ್ತರು ನಡೆಸಿದ ಗದ್ದಲದ ಬಗ್ಗೆ ಮಾಧ್ಯಮಗಳಲ್ಲಿ ಭಿನ್ನ ಭಿನ್ನ ರೀತಿಯ ವರದಿಗಳು ಬಂದಿದ್ದು, ಈ ಬಗ್ಗೆ ವಾಸ್ತವ ಸಂಗತಿಯನ್ನು ನಾವು ತಿಳಿಸುತಿದ್ದೇವೆ.
ಯುಗಾದಿ ಹಬ್ಬದ ದಿನದಂದು ವಿದ್ಯಾಪೀಠದಲ್ಲಿ ವಿಷ್ಣು ಸಹಸ್ರನಾಮ, ಪಾರಾಯಣ, ಪೂಜಾದಿ ಕಾರ್ಯಕ್ರಮಗಳು ನಡೆದಿವೆ. ಆ ಸಂದರ್ಭದಲ್ಲಿ ನಮ್ಮ ನೇತೃತ್ವದಲ್ಲಿ ಧಾರ್ಮಿಕ ಸಭೆ ನಡೆಯಿತು. ಈ ಬಗ್ಗೆ ಮೊದಲೇ ಪೊಲೀಸ್ ಅಧಿಕಾರಿಗಳು ವಿಚಾರಿಸಿದ್ದರು. ಧಾರ್ಮಿಕ ಉಪನ್ಯಾಸಕ್ಕೆ ಹೊರತಾದ ರಾಜಕೀಯ ಹಾಗೂ ಚುನಾವಣೆಗೆ ಸಂಬಂಧಿಸಿದ ಉಪನ್ಯಾಸಗಳು ನಡೆಯುವುದಿಲ್ಲ ಎಂದು ಭರವಸೆ ನೀಡಿದ್ದೆವು. ಅದರಂತೆ ಚಕ್ರವರ್ತಿ ಸೂಲಿಬೆಲೆ ಅವರಿಗೂ ಕೇವಲ ಧರ್ಮ, ಸಂಸ್ಕೃತಿ, ರಾಷ್ಟ್ರದ ಬಗ್ಗೆ ಉಪನ್ಯಾಸ ಮಾಡಲು ತಿಳಿಸಿದ್ದೆವು. ಅವರು ಸಹ ಒಪ್ಪಿದ್ದರು. ಅದರಂತೆ ಅವರು ಯಾವ ರಾಜಕೀಯ ವಿಚಾರ ಎತ್ತದೆ ರಾಷ್ಟ್ರದ ಪರಂಪರೆ, ರಾಷ್ಟ್ರದ ಮಹತ್ವ, ಇರಬೇಕಾದ ಅಭಿಮಾನ ಕುರಿತಂತೆ ಯಾವ ರಾಜಕೀಯ ಸೊಂಕಿಲ್ಲದೆ ಉಪನ್ಯಾಸ ನೀಡಿದ್ದರು.
ಇದನ್ನು ಅರಿಯದೇ ತಪ್ಪು ತಿಳುವಳಿಕೆಯಿಂದ, ಅವರು ರಾಜಕೀಯ ಭಾಷಣ ಮಾಡುತ್ತಾರೆ ಎಂಬ ತಪ್ಪು ಕಲ್ಪನೆಯಿಂದ ರಾಜಕೀಯ ಪಕ್ಷದ ಕೆಲ ಕಾರ್ಯಕರ್ತ ರು ಬಂದು ಘೋಷಣೆ ಕೂಗಿದರು. ಪ್ರತಿ ಘೋಷಣೆಯೂ ನಡೆಯಿತು. ಕೊನೆಗೆ ನಿಜವಾದ ಸಂಗತಿಯನ್ನು ತಿಳಿಸಲಾಯಿತು. ಪೊಲೀಸ್ ಅಧಿಕಾರಿಗಳು ಬಂದು ಮನವರಿಕೆ ಮಾಡಿದರು. ಆಮೇಲೆ ಗದ್ದಲ ನಿಂತು ಹೋಯಿತು.
ನಾವು ಮೊದಲಿನಿಂದಲೂ ರಾಜಕೀಯ ಪಕ್ಷಕ್ಕೆ ಅತೀತರು. ನಾವು ಯಾವುದೇ ರಾಜಕೀಯ ಭಾಷಣಕ್ಕೆ ಅವಕಾಶ ಕೊಟ್ಟಿಲ್ಲ, ಅದುನಡೆದೂ ಇಲ್ಲ. ಆದುದರಿಂದ ಪೂರ್ಣಪ್ರಜ್ಞ ವಿದ್ಯಾಪೀಠದಲ್ಲಿ ನಡೆದ ಕಾರ್ಯಕ್ರಮದ ಬಗ್ಗೆ ಯಾರೂ ತಪ್ಪು ತಿಳಿದುಕೊಳ್ಳಬಾರದು. ನಮ್ಮ ಧೋರಣೆಗೆ ವಿರುದ್ಧವಾಗಿ, ಚುನಾವಣಾ ಸಮ್ಮತಿಗೆ ವಿರುದ್ಧವಾದ ಭಾಷಣ ಅಲ್ಲಿ ನಡೆದಿಲ್ಲ ಎಂದು ಸ್ಪಷ್ಟಪಡಿಸುತ್ತೇವೆ.’ ಎಂದು ಪೇಜಾವರಶ್ರೀಗಳು ಪತ್ರಿಕೆಗಳಿಗೆ ಬಿಡುಗಡೆಗೊಳಿಸಿರುವ ಹೇಳಿಕೆಯಲ್ಲಿ ತಿಳಿಸಿದ್ದಾರೆ.







