ಗ್ಲಾಸಿನಲ್ಲಿ ಚುನಾವಣಾ ಜಾಹೀರಾತು ಪ್ರಕಟಿಸುವ ವಾಹನಗಳ ಮುಟ್ಟುಗೋಲು: ಉಡುಪಿ ಜಿಲ್ಲಾಧಿಕಾರಿ ಎಚ್ಚರಿಕೆ
ಉಡುಪಿ, ಎ.8: ಖಾಸಗಿ ವಾಹನ ಮತ್ತು ಇತರ ವಾಹನಗಳಲ್ಲಿ ವ್ಯಾಪಾರ ಮತ್ತು ವ್ಯಕ್ತಿಗಳ, ಪಕ್ಷಗಳ ಜಾಹಿರಾತು ಮತ್ತು ಧ್ಯೇಯೋಕ್ತಿ(ಸ್ಲೋಗನ್)ಗಳನ್ನು ಹಿಂಭಾಗ ಮತ್ತು ಮುಂಭಾಗದ ಕಿಟಕಿ ಮತ್ತು ಮುಂಭಾಗದ ಕಿಟಕಿ ಗಾಜಿನ ಮೇಲೆ ಪ್ರದರ್ಶನ ಮಾಡಿ ಓಡಾಡುವ ವಾಹನಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ನಿರ್ಧರಿಸಿದ್ದಾರೆ.
ಸೂಕ್ತ ಪ್ರಾಧಿಕಾರದ ಪೂರ್ವಾನುಮತಿ ಇಲ್ಲದೇ ಈ ರೀತಿಯಾಗಿ ವ್ಯಾಪಾರ ಮತ್ತು ಚುನಾವಣೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವಂತಹ ಯಾವುದೇ ಜಾಹೀರಾತು ಅಥವಾ ಧ್ಯೇಯೋಕ್ತಿಗಳನ್ನು ಪ್ರದರ್ಶಿಸುವುದು ಹೈಕೋರ್ಟ್ ಆದೇಶದ ಉಲ್ಲಂಘನೆ ಹಾಗೂ ಮೋಟಾರು ವಾಹನ ಕಾಯ್ದೆಯ ಉಲ್ಲಂಘನೆ ಯಾಗಿರುತ್ತದೆ.
ಆದುದರಿಂದ ಎಲ್ಲಾ ವಾಹನ ಮಾಲಕರು ಯಾವುದೇ ಧ್ಯೇಯೋಕ್ತಿ ಆಗಲಿ ಅಥವಾ ಜಾಹೀರಾತು ಆಗಲಿ ತಮ್ಮ ವಾಹನದ ಮೇಲೆ ಪ್ರದರ್ಶಿಸುವಂತಿಲ್ಲ. ಚುನಾವಣಾ ಸಮಯದಲ್ಲಿ ಈ ರೀತಿಯ ಉಲ್ಲಂಘನೆಗಳು ಕಂಡುಬಂದಲ್ಲಿ ಯಾವುದೇ ಮರು ನೋಟೀಸ್ ನೀಡದೇ ವಾಹನವನ್ನು ಮುಟ್ಟುಗೋಲು ಹಾಕಿ ಕಾನೂನು ಪ್ರಕರಣ ದಾಖಲಿಸಲಾಗುವುದೆಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.





