ಆರೋಪಿಗಳ ವಿರುದ್ಧ ಕಾನೂನುಕ್ರಮಕ್ಕೆ ಅನುಮತಿ ಬಗ್ಗೆ ನಿರ್ಧರಿಸಲು ದಿಲ್ಲಿ ಸರಕಾರಕ್ಕೆ ಜು.23ರವರೆಗೆ ಅವಕಾಶ
ಜೆಎನ್‌ಯು ಪ್ರಕರಣ

ಹೊಸದಿಲ್ಲಿ,ಎ.8: ಇಲ್ಲಿಯ ಪಟಿಯಾಲಾ ಹೌಸ್ ನ್ಯಾಯಾಲಯವು 2016ರ ದೇಶದ್ರೋಹ ಪ್ರಕರಣದಲ್ಲಿ ಜೆಎನ್‌ಯು ವಿದ್ಯಾರ್ಥಿ ಸಂಘದ ಮಾಜಿ ಅಧ್ಯಕ್ಷ ಕನ್ಹಯ್ಯ ಕುಮಾರ್ ಮತ್ತು ಸಹಆರೋಪಿಗಳ ವಿರುದ್ಧ ಕಾನೂನು ಕ್ರಮಕ್ಕೆ ಅನುಮತಿ ನೀಡುವ ಬಗ್ಗೆ ನಿರ್ಧರಿಸಲು ದಿಲ್ಲಿ ಸರಕಾರಕ್ಕೆ ಜು.23ರವರೆಗೆ ಕಾಲಾವಕಾಶ ನೀಡಿ ಸೋಮವಾರ ಆದೇಶಿಸಿದೆ.
ಕಾನೂನು ಕ್ರಮಕ್ಕೆ ಅನುಮತಿ ನೀಡಬೇಕೇ ಎನ್ನುವುದನ್ನು ನಿರ್ಧರಿಸಲು ತನಗೆ ಒಂದು ತಿಂಗಳ ಸಮಯಾವಕಾಶ ಅಗತ್ಯವಿದೆ ಎಂದು ಆಪ್ ನೇತೃತ್ವದ ದಿಲ್ಲಿ ಸರಕಾರವು ಕಳೆದ ವಾರ ಹೇಳಿತ್ತು. ನಂತರ ಎ.5ರಂದು ವಿಚಾರಣೆ ವೇಳೆ ಪೊಲೀಸರು ಸಕ್ಷಮ ಪ್ರಾಧಿಕಾರದಿಂದ ಅನುಮತಿಯನ್ನು ಪಡೆದುಕೊಳ್ಳದೆ ಜನವರಿಯಲ್ಲಿ ದೇಶದ್ರೋಹ ಪ್ರಕರಣದಲ್ಲಿ ಆರೋಪಪಟ್ಟಿಯನ್ನು ರಹಸ್ಯವಾಗಿ ಮತ್ತು ಅವಸರದಿಂದ ಸಲ್ಲಿಸಿದ್ದಾರೆ ಎಂದು ಅದು ನ್ಯಾಯಾಲಯಕ್ಕೆ ತಿಳಿಸಿತ್ತು.
ಸರಕಾರವು ವಿಷಯವನ್ನು ಪರಿಶೀಲಿಸುತ್ತಿದೆ ಮತ್ತು ತನ್ನ ಸ್ಥಾಯಿ ವಕೀಲ(ಕ್ರಿಮಿನಲ್) ರಾಹುಲ್ ಮೆಹ್ರಾ ಅವರ ಅಭಿಪ್ರಾಯಕ್ಕಾಗಿ ಕಾಯುತ್ತಿದೆ ಎಂದು ಹೆಚ್ಚುವರಿ ಸಾರ್ವಜನಿಕ ಅಭಿಯೋಜಕ ವಿಕಾಸ್ ಸಿಂಗ್ ಅವರು ನ್ಯಾಯಾಲಯಕ್ಕೆ ತಿಳಿಸಿದ್ದರು. ಆರೋಪಿಗಳ ಕೃತ್ಯವು ದೇಶದ್ರೋಹವಾಗಿತ್ತೇ ಎನ್ನುವುದನ್ನು ನಿರ್ಧರಿಸಲು ತನಗೆ ಸಮಯಾವಕಾಶದ ಅಗತ್ಯವಿದೆ ಎಂದೂ ದಿಲ್ಲಿ ಸರಕಾರವು ಹೇಳಿತ್ತು.
2016,ಫೆಬ್ರವರಿಯಲ್ಲಿ ಕ್ಯಾಂಪಸ್ ಪ್ರತಿಭಟನೆ ಸಂದರ್ಭ ರಾಷ್ಟ್ರವಿರೋಧಿ ಘೋಷಣೆಗಳನ್ನು ಕೂಗಿದ್ದಕ್ಕಾಗಿ ದಾಖಲಾಗಿದ್ದ ದೇಶದ್ರೋಹ ಪ್ರಕರಣದಲ್ಲಿ ಕನ್ಹಯ್ಯ ಕುಮಾರ್, ಉಮರ್ ಖಾಲಿದ್ ಮತ್ತು ಅನಿರ್ಬನ್ ಭಟ್ಟಾಚಾರ್ಯ ಹಾಗೂ ಇತರರನ್ನು ಹೆಸರಿಸಿ ಆರೋಪಪಟ್ಟಿಯನ್ನು ಪೊಲೀಸರು ಜ.14ರಂದು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ದಿಲ್ಲಿ ಸರಕಾರದ ಅನುಮತಿ ಪಡೆದುಕೊಳ್ಳದೆ ಆರೋಪ ಪಟ್ಟಿಯನ್ನು ಸಲ್ಲಿಸಿದ್ದಕ್ಕಾಗಿ ಜ.19ರಂದು ನ್ಯಾಯಾಲಯವು ಪೊಲೀಸರನ್ನು ಟೀಕಿಸಿತ್ತು. ಅದು ನಂತರ ಅನುಮತಿ ಮಂಜೂರು ಪ್ರಕ್ರಿಯೆಯನ್ನು ವಿಳಂಬಿಸುತ್ತಿರುವುದಕ್ಕಾಗಿ ದಿಲ್ಲಿ ಸರಕಾರವನ್ನೂ ತರಾಟೆಗೆತ್ತಿಕೊಂಡಿತ್ತು.







