ಮೋದಿ ಬಯೋಪಿಕ್ ಬಿಡುಗಡೆ ತಡೆಗೆ ಆದೇಶಿಸುವಂತೆ ಕೋರಿದ ಮನವಿ ತಿರಸ್ಕೃತ

ಹೊಸದಿಲ್ಲಿ, ಎ. 8: ಸೆನ್ಸಾರ್ ಮಂಡಳಿ ಇದುವರೆಗೆ ಪ್ರಮಾಣಪತ್ರ ನೀಡದೇ ಇರುವುದರಿಂದ ಪ್ರಧಾನಿ ನರೇಂದ್ರ ಮೋದಿ ಕುರಿತ ಬಯೋಪಿಕ್ ಬಿಡುಗಡೆ ತಡೆಗೆ ಆದೇಶ ನೀಡಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಸೋಮವಾರ ಹೇಳಿದೆ.
ಮೋದಿ ಬಯೋಪಿಕ್‌ಗೆ ತಡೆ ನೀಡುವಂತೆ ಕೋರಿ ಸಲ್ಲಿಸಲಾದ ಮನವಿಯ ವಿಚಾರಣೆಯನ್ನು ಮಂಗಳವಾರ ನಡೆಸಲಾಗುವುದು. ಚಿತ್ರ ಆಕ್ಷೇಪಾರ್ಹ ಅಂಶಗಳನ್ನು ಒಳಗೊಂಡಿದೆ ಎಂಬ ಬಗ್ಗೆ ದೂರುದಾರರು ದಾಖಲೆಗಳನ್ನು ಸಲ್ಲಿಸಿದರೆ, ಆದೇಶ ನೀಡಲು ಸಾಧ್ಯವಾಗಬಹುದು ಎಂದು ಅದು ಹೇಳಿದೆ. ಚಿತ್ರದ ಪ್ರತಿಯನ್ನು ತನಗೆ ನೀಡಬೇಕು ಎಂದು ಕಾಂಗ್ರೆಸ್ ಕಾರ್ಯಕರ್ತ, ದೂರುದಾರ ಸಲ್ಲಿಸಿದ ಮನವಿಯನ್ನು ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ನೇತೃತ್ವದ ಪೀಠ ತಿರಸ್ಕರಿಸಿದೆ.
‘‘ಚಿತ್ರದ ಪ್ರತಿಯನ್ನು ಒಬ್ಬ ವ್ಯಕ್ತಿಗೆ ನೀಡಬೇಕು ಎಂದು ನಾವು ಯಾಕೆ ನಿರ್ದೇಶಿಸಬೇಕು.’’ ಎಂದು ನ್ಯಾಯಮೂರ್ತಿ ದೀಪಕ್ ಗುಪ್ತಾ ಹಾಗೂ ಸಂಜೀವ್ ಖನ್ನಾ ಅವರನ್ನು ಕೂಡ ಒಳಗೊಂಡ ಪೀಠ ಹೇಳಿದೆ. ಎಪ್ರಿಲ್ 11ರಂದು ಬಯೋಪಿಕ್ ಅನ್ನು ಬಿಡುಗಡೆಗೊಳಿಸಲಾಗುವುದು ಎಂದು ನಿರ್ಮಾಪಕ ಸುದೀಪ್ ಸಿಂಗ್ ಹೇಳಿಕೆ ನೀಡಿದ್ದಾರೆ ಎಂದು ಕಾಂಗ್ರೆಸ್ ಕಾರ್ಯಕರ್ತನ ಪರವಾಗಿ ನ್ಯಾಯಾಲಯದ ಮುಂದೆ ಹಾಜರಾದ ಹಿರಿಯ ನ್ಯಾಯವಾದಿ ಎ.ಎಂ. ಸಿಂಘ್ವಿ ಹೇಳಿದರು.





