ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯಗೆ ಮತ ನೀಡಬೇಡಿ: ಸಂಉಒ ಮನವಿ

ಬೆಂಗಳೂರು, ಎ.8: ಸಂವಿಧಾನ ಹಾಗೂ ಮಹಿಳೆಯರ ಘನತೆಗೆ ಗೌರವ ನೀಡದಿರುವ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ಅವರಿಗೆ ಮತ ನೀಡಬಾರದು ಎಂದು ಸಂವಿಧಾನ ಉಳಿವಿಗಾಗಿ ಒಕ್ಕೂಟ ಮತದಾರರಲ್ಲಿ ಮನವಿ ಮಾಡಿದೆ.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಲೇಖಕಿ ಡಾ.ಲೀಲಾ ಸಂಪಿಗೆ ಮಾತನಾಡಿ, ಲೋಕಸಭಾ ಚುನಾವಣೆಯಲ್ಲಿ ಪ್ರಜಾಪ್ರಭುತ್ವ ಸಂವಿಧಾನ ಮತ್ತು ಮಹಿಳೆಯರಿಗೆ ಗೌರವ ನೀಡಿ ಬದ್ಧತೆ ತೋರಿಸುವ ಅಭ್ಯರ್ಥಿಗಳನ್ನು ಆಯ್ಕೆ ಮಾಡಬೇಕು. ಆದರೆ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ಅವರಿಗೆ ಈ ಸಂವಿಧಾನ ಮತ್ತು ಮಹಿಳೆಯರ ಪರವಾದ ನಿಲುವುಗಳಿಲ್ಲ ಎಂದು ತಿಳಿಸಿದರು.
ಮಹಿಳೆಯರು ಗೃಹಕೃತ್ಯಗಳಿಗಷ್ಟೇ ಸೀಮಿತ ಎಂದು ಭಾವಿಸಿರುವ ಇಂತಹ ವ್ಯಕ್ತಿಯನ್ನು ಸಂಸತ್‌ಗೆ ಆಯ್ಕೆ ಮಾಡಿ ಕಳುಹಿಸಿದರೆ ಲಿಂಗ ಅಸಮಾನತೆ ಸಮಾಜ ಪುನಃ ಬಲಿಷ್ಠವಾಗಿ ಬೇರೂರುವ ಅಪಾಯವಿದೆ. ಹೀಗಾಗಿ ತೇಜಸ್ವಿ ಸೂರ್ಯ ಅವರನ್ನು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಮಹಿಳಾ ಮತದಾರರು ಆಯ್ಕೆ ಮಾಡಬಾರದು ಎಂದು ಹೇಳಿದರು.
ರಾಜಕೀಯ ಕ್ಷೇತ್ರದಲ್ಲಿ ಶೇ.33ರಷ್ಟು ಮಹಿಳೆಯರಿಗೆ ಮೀಸಲಾತಿ ನೀಡಬೇಕು ಎಂಬ ವಿಷಯದಲ್ಲಿ ತೇಜಸ್ವಿ ಸೂರ್ಯ ಮಹಿಳೆಯರು ಮನೆ ಕೆಲಸಗಳನ್ನು ಮಾಡಲು, ಮಕ್ಕಳನ್ನು ಹೇರಲಷ್ಟೇ ಸೀಮಿತ. ಅವರು ಮನೆಯೊಳಗೆ ಇರಬೇಕು. ರಾಜಕೀಯ ಕ್ಷೇತ್ರ ಮಹಿಳೆಯರಿಗೆ ಸಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಇದು ರಾಷ್ಟ್ರದ ನೀತಿ ನಿಯಮಗಳಲ್ಲಿ ಮಹತ್ವದ ಪ್ರಭಾವ ಬೀರುವುದಾಗಿರುತ್ತದೆ. ಮಹಿಳೆಯರಿಗೆ ಅಗೌರವ ತೋರುವ ಇಂತಹ ವ್ಯಕ್ತಿಗಳನ್ನು ಆಯ್ಕೆ ಮಾಡಿ ಕಳುಹಿಸಿದರೆ ಮಹಿಳಾ ಸ್ವಾತಂತ್ರದ ಹರಣವಾಗಲಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಲೇಖಕಿ ಡಾ.ಮಮತಾ ಜಿ.ಸಾಗರ್ ಮಾತನಾಡಿ, ಸಂವಿಧಾನದ ಆಶಯಗಳನ್ನು ಗಾಳಿಗೆ ತೂರುವ ನಿಲುವು ಹೊಂದಿರುವ ಮತ್ತು ಮಹಿಳೆಯರಿಗೆ ಅಗೌರವ ತೋರುವ ವ್ಯಕ್ತಿಗೆ ಚುನಾವಣೆಯ ಟಿಕೆಟ್ ನೀಡಿರುವ ಆ ಪಕ್ಷದ ನಡವಳಿಕೆ ಎಂತಹದು ಎಂದು ನಾಗರಿಕರು ಚರ್ಚಿಸಬೇಕು. ಅಂಬೇಡ್ಕರ್ ಕುರಿತಾಗಿ ತಿರಸ್ಕಾರ ಹೊಂದಿರುವ, ಮಹಿಳೆಯರ ಸಬಲೀಕರಣದ ಬಗ್ಗೆ ನಕಾರಾತ್ಮಕವಾಗಿ ಆಲೋಚಿಸುವ, ಮಹಿಳೆಯರ ಘನತೆಗೆ ಧಕ್ಕೆ ತರುವಂತಹ ನಡವಳಿಕೆಗಳನ್ನು ಹೊಂದಿರುವ ಇಂತಹ ವ್ಯಕ್ತಿಯಿಂದ ಮಹಿಳೆಯರ ಅಭಿವೃದ್ಧಿ ಅಸಾಧ್ಯ. ಹೀಗಾಗಿ ಈ ವ್ಯಕ್ತಿಯನ್ನು ಸಂಸತ್‌ಗೆ ಆಯ್ಕೆ ಮಾಡಬಾರದು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂವಿಧಾನ ಉಳಿವಿಗಾಗಿ ಒಕ್ಕೂಟದ ಗೌರಿ, ದಲಿತ ಹೋರಾಟಗಾರ್ತಿ ಸಿಂಥಿಯಾ ಸ್ಟೀಫನ್ ಮತ್ತಿತರರು ಉಪಸ್ಥಿತರಿದ್ದರು.







