ಮೋದಿ ಮುಖವಾಡ ಟೀಕೆಗೆ ಡಿವಿಎಸ್ ಸವಾಲು

ಬೆಂಗಳೂರು, ಎ. 8: ಮೋದಿ ಸಾಧನೆ ಸಹಿಸದೆ ಕಾಂಗ್ರೆಸ್ ಮುಖಂಡರು ಮೋದಿ ಮುಖವಾಡದ ಬಗ್ಗೆ ಟೀಕಿಸುತ್ತಿದ್ದಾರೆ. ಆದರೆ, ಕಾಂಗ್ರೆಸಿಗರು ಮನಮೋಹನ್ ಸಿಂಗ್ ಅವರ ಹೆಸರು ಹೇಳಿ ಮತಯಾಚನೆ ಮಾಡಲಿ ಎಂದು ಬೆಂಗಳೂರು ಉತ್ತರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸದಾನಂದಗೌಡ ಇಂದಿಲ್ಲಿ ಸವಾಲು ಹಾಕಿದ್ದಾರೆ.
ಸೋಮವಾರ ಇಲ್ಲಿನ ಯಶವಂತಪುರದಲ್ಲಿರುವ ಮೇವಾರ ಭವನದಲ್ಲಿ ಹಿಂದುಳಿದ ವರ್ಗಗಳ ಮುಖಂಡ ಸಭೆಯಲ್ಲಿ ಮಾತನಾಡಿದ ಅವರು, ದೇಶಕ್ಕೆ ಸಮರ್ಥ ನಾಯಕನನ್ನು ನೀಡಿದ ಹಿಂದುಳಿದ ವರ್ಗ ಮೋದಿ ಮತ್ತೊಮ್ಮೆ ಪ್ರಧಾನಿಯನ್ನಾಗಿ ಮಾಡಲು ಶ್ರಮಿಸಬೇಕೆಂದು ಮನವಿ ಮಾಡಿದರು.
ಮೋದಿಯವರಂತಹ ಜಾಗತಿಕ ನಾಯಕನನ್ನು ದೇಶಕ್ಕೆ ನೀಡಿದ ಕೊಡುಗೆ ನೀಡಿದ ಹೆಮ್ಮೆ ಹಿಂದುಳಿದ ವರ್ಗಗಳಿಗೆ ಸಲ್ಲುತ್ತದೆ. ಸಮರ್ಥ ನಾಯಕತ್ವ, ಸುಸ್ಥಿರ ಆಡಳಿತಕ್ಕಾಗಿ ಬಿಜೆಪಿಯನ್ನು ಬೆಂಬಲಿಸಿ ಎಂದ ಅವರು, ಜಿಎಸ್ಪಿ, ಉಜ್ವಲ, ಮುದ್ರಾ, ಜನರಿಕ್ ಔಷಧಿ, ಜನ್‌ಧನ್ ಸೇರಿದಂತೆ ಹಲವು ಯೋಜನೆ ರೂಪಿಸಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಹಿಂ.ವರ್ಗಗಳ ಮೋರ್ಚಾ ಅಧ್ಯಕ್ಷ ಬಿ.ಜೆ.ಪುಟ್ಟಸ್ವಾಮಿ ಮಾತನಾಡಿ, ಸದಾನಂದಗೌಡ ಸಜ್ಜನರು. ದುರಹಂಕಾರದ ರಾಜಕಾರಣವನ್ನು ಎಂದೂ ಮಾಡಿಲ್ಲ. ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ಇಂತಹ ಒಳ್ಳೆಯ ವ್ಯಕ್ತಿ ಪುನರಾಯ್ಕೆ ಮಾಡಲು ಎಲ್ಲರೂ ಶ್ರಮಿಸಬೇಕು ಎಂದು ಕೋರಿದರು.





