ಪಿಸ್ತೂಲು ಮಾರಾಟ ಜಾಲ ಬೇಧಿಸಿದ ಸಿಸಿಬಿ: 2 ಪಿಸ್ತೂಲು, 8 ಜೀವಂತ ಗುಂಡು ಜಪ್ತಿ
ಬೆಂಗಳೂರು, ಎ.8: ಪಿಸ್ತೂಲು, ಮದ್ದು ಗುಂಡುಗಳನ್ನು ಅಕ್ರಮ ಮಾರಾಟ ಜಾಲವೊಂದನ್ನು ಬೇಧಿಸಿರುವ ಸಿಸಿಬಿ ಪೊಲೀಸರು, 8 ಜನರನ್ನು ಬಂಧಿಸಿ, 2 ಪಿಸ್ತೂಲು, 8 ಜೀವಂತ ಗುಂಡು, ಒಂದು ಏರ್ ಗನ್, 500 ಎಂಎಲ್ ಕ್ಲೋರೋಫಾರ್ಮ್ ಜಪ್ತಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಹೆಬ್ಬಾಳ ನಿವಾಸಿ, ಶಕೀಲ್ ಅಹ್ಮದ್, ಸುಲ್ತಾನ್‌ಪಾಳ್ಯ ನಿವಾಸಿ ಶರ್ವಣ್ ಕತ್ರಿ, ಮಹಾರಾಷ್ಟ್ರ ಮೂಲದ ಇಮ್ರಾನ್‌ಖಾನ್, ಭಟ್ಕಳ ತಾಲೂಕಿನ ಮುರುಡೇಶ್ವರ ನಿವಾಸಿ ಜಲೀಲ್ ಉಮರ್, ಮಾಲೂರಿನ ರಫೀ ಅಹ್ಮದ್ ಖಾನ್, ಗೋವಿಂದಪುರ ನಿವಾಸಿ ಸೈಯದ್ ವಸೀಂ, ಮುಂಬೈ ಮೂಲದ ಹಸನ್ ಅನ್ಸಾರಿ ಹಾಗೂ ಇಮ್ರಾನ್ ಎಂಬಾತ ಬಂಧಿತ ಆರೋಪಿಗಳೆಂದು ಪತ್ರಿಕಾಗೋಷ್ಠಿಯಲ್ಲಿ ನಗರ ಪೊಲೀಸ್ ಆಯುಕ್ತ ಟಿ.ಸುನೀಲ್ ಕುಮಾರ್ ತಿಳಿಸಿದರು.
ಏನಿದು ಪ್ರಕರಣ?: ಎ.7 ರಂದು ಸಂಜೆ 5:30 ಸುಮಾರಿಗೆ ಸಿಸಿಬಿ ಸಂಘಟಿತ ಅಪರಾಧ ದಳದ ಅಧಿಕಾರಿ ಮುರುಗೇಂದ್ರಯ್ಯ ಹಾಗೂ ಸಿಬ್ಬಂದಿ, ಆರ್‌ಟಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ತರಳಬಾಳು ರಸ್ತೆಯಲ್ಲಿ ಅಕ್ರಮವಾಗಿ ಪಿಸ್ತೂಲ್ ಮದ್ದು ಗುಂಡುಗಳನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದಾರೆಂಬ ಮಾಹಿತಿ ಸಂಗ್ರಹಿಸಿ ದಾಳಿ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಆರೋಪಿಗಳ ಪೈಕಿ ಇಬ್ಬರು ಮಹಾರಾಷ್ಟ್ರದ ಅಮರಾವತಿ ನಗರದವರಾಗಿದ್ದು, ಬೆಂಗಳೂರಿನಲ್ಲಿ ದೇಶಿ ನಿರ್ಮಿತ ಪಿಸ್ತೂಲ್‌ಗಳನ್ನು ಮಾರಾಟ ಮಾಡಲು ಬಂದಿರುವುದಾಗಿ ತಿಳಿದುಬಂದಿದೆ. ಉಳಿದ 6 ಜನರು ಬೆಂಗಳೂರಿನ ನಿವಾಸಿಗಳಾಗಿದ್ದು, ಪಿಸ್ತೂಲ್ ಮತ್ತು ಮದ್ದು ಗುಂಡುಗಳನ್ನು ಖರೀದಿಸಲು ಬಂದಿದ್ದರು.
ಬಂಧಿತರಿಂದ ಪಿಸ್ತೂಲು, ಮದ್ದು ಗುಂಡುಗಳ ಜೊತೆಗೆ, 55 ಸಾವಿರ ರೂ. ನಗದು, 24 ಇಂಚು ಉದ್ದದ ಒಂದು ಕಟ್ಟರ್, ಕಾರು, ಬೈಕ್ ಜಪ್ತಿ ಮಾಡಿ, ಇಲ್ಲಿನ ಆರ್.ಟಿ.ನಗರ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ಾಖಲಿಸಿ ತನಿಖೆ ಮುಂದುವರೆಸಲಾಗಿದೆ.
ಪತ್ರಿಕಾಗೋಷ್ಠಿಯಲ್ಲಿ ಬೆಂಗಳೂರು ನಗರದ ಅಪರಾಧ ವಿಭಾಗದ ಅಪರ ಪೊಲೀಸ್ ಆಯುಕ್ತ ಆಲೋಕ್ ಕುಮಾರ್, ಸಿಸಿಬಿ ಡಿಸಿಪಿ ಎಸ್.ಗಿರೀಶ್ ಹಾಜರಿದ್ದರು.







