ಪ್ರಧಾನಿ ಮೋದಿ ದೇಶದ ಹಿಟ್ಲರ್: ಮಾಜಿ ಕೇಂದ್ರ ಸಚಿವ ಕೆ.ಎಚ್.ಮುನಿಯಪ್ಪ

ಮೈಸೂರು: ಪ್ರಧಾನಿ ನರೇಂದ್ರ ಮೋದಿ ಈ ದೇಶದ ಹಿಟ್ಲರ್ ಎಂದು ಮಾಜಿ ಕೇಂದ್ರ ಸಚಿವ ಕೆ.ಎಚ್.ಮುನಿಯಪ್ಪ ಜರಿದರು.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಮಂಗಳವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಬಿಜೆಪಿ ಕಟ್ಟಿದ ಹಿರಿಯ ನಾಯಕರುಗಳಾದ ಎಲ್.ಕೆ. ಅಡ್ವಾಣಿ, ಮುರಳಿ ಮನೋಹರ್ ಜೋಶಿ, ಉಮಾಭಾರತಿ, ಸುಷ್ಮಸ್ವರಾಜ್ ಅವರನ್ನು ರಾಜಕೀಯವಾಗಿ ಮುಗುಸಿದ ರೀತಿ ಎಲ್ಲರನ್ನು ಮುಗಿಸಿ ಸರ್ವಾಧಿಕಾರಿ ಆಡಳಿತ ನಡೆಸಬೇಕು ಎಂಬ ಭ್ರಮೆಯಲ್ಲಿದ್ದಾರೆ ಅದು ಎಂದಿಗೂ ಸಾಧ್ಯವಿಲ್ಲ ಎಂದು ಹೇಳಿದರು.
ಮೋದಿ ನೇತೃತ್ವದಲ್ಲಿ ದಲಿತರು, ಹಿಂದುಳಿದವರು, ಮಹಿಳೆಯರ ಮೇಲೆ ನಡೆದಂತ ಅತ್ಯಾಚಾರ ಹಿಂದೆಂದೂ ನಡೆದಿರಲಿಲ್ಲ. ಇದೊಂದು ಕೋಮುವಾದಿ ಪಕ್ಷ ಎಂದು ರುಜುವಾತಾಗಿದೆ ಎಂದರು.
ಕಳೆದ ಐದು ವರ್ಷಗಳಿಂದ ಬಡವರು, ರೈತರು, ಮಹಿಳೆಯರು, ದಲಿತರು, ಅಲ್ಪಸಂಖ್ಯಾತರು ಸೇರಿದಂತೆ ಹಿಂದುಳಿದ ವರ್ಗಗಳ ಯಾವ ಜನರು ನೆಮ್ಮದಿಯಿಂದ ಇಲ್ಲ, ಇವರ ಸರ್ವಾಧಿಕಾರಿ ಆಡಳಿತ ಕಂಡು ಜನ ಬೇಸತ್ತಿದ್ದಾರೆ. ಹಾಗಾಗಿ ಈ ಬಾರಿ ಬಿಜೆಪಿಯನ್ನು ತಿರಸ್ಕರಿಸಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಲಿದ್ದಾರೆ ಎಂದರು.
ಮಾಯಾವತಿ, ಅಖಿಲೇಶ್ ಯಾದವ್ ಸೇರಿದಂತೆ ಅನೇಕ ಜಾತ್ಯಾತೀತ ಮನೋಭಾವ ಹೊಂದಿರುವವರಿಗೆ ಕಾಂಗ್ರೆಸ್ ಪಕ್ಷದ ಜೊತೆ ಕೈಜೋಡಿಸದಂತೆ ಹೆದರುಸಿದ್ದಾರೆ. ಕಳೆದ ಬಾರಿ ದೇಶದಲ್ಲಿ ನಡೆದ ಮಿನಿಸಮರವನ್ನು ನೋಡಿ ಪ್ರಧಾನಿ ನರೇಂದ್ರ ಮೋದಿ ಬೆಚ್ಚುಬಿದ್ದಿದ್ದಾರೆ ಎಂದು ಲೇವಡಿ ಮಾಡಿದರು.
ಬಿಜೆಪಿ ಪ್ರಣಾಳಿಕೆಯಲ್ಲಿ ರೈತರ ಬಗ್ಗೆ ಪ್ರಸ್ತಾಪಿಸಲಾಗಿದೆ. ಕಳೆದ ಐದು ವರ್ಷಗಳಲ್ಲಿ ಮಳೆ, ಬೆಳೆಯಿಲ್ಲದೆ ರೈತರು ಸಾಕಷ್ಟು ಸಂಕಷ್ಟ ಎದುರಿಸಿದ್ದಾರೆ. ಅವರ ಒಂದೇ ಒಂದು ರೂಪಾಯಿ ಸಾಲ ಮನ್ನಾ ಮಾಡದೆ ಉದ್ಯಮಿಗಳ ಸುಮಾರು 40 ಸಾವಿರ ಕೋಟಿ. ರೂಗಳ ಸಾಲ ಮನ್ನಾ ಮಾಡಲಾಗಿದೆ. ಇವರಿಗೆ ರೈತರ ಬಗ್ಗೆ ಮಾತನಾಡಲು ಯಾವ ನೈತಿಕತೆ ಇದೆ ಎಂದು ಪ್ರಶ್ನಿಸಿದರು.
ಮೈಸೂರು-ಕೊಡಗು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸಿ.ಎಚ್.ವಿಜಯಶಂಕರ್ ಉತ್ತಮ ಅಭ್ಯರ್ಥಿಯಾಗಿದ್ದು ಅವರನ್ನು ಸಂಸತ್ ಗೆ ಕಳುಹಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಹೇಳಿದರು.
ಹಾಗೆ ಚಾಮರಾಜನಗರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆರ್.ಧ್ರುವನಾರಾಯಣ್ ಒಬ್ಬ ಸಮರ್ಥ ಸಂಸದೀಯ ಪಟುವಾಗಿದ್ದು ಸಂಸದರ ನಿಧಿಯನ್ನು ಸಮರ್ಪಕವಾಗಿ ಬಳಸಿಕೊಂಡು ರಾಜ್ಯದ ನಂಬರ್ ಒನ್ ಸಂಸದ ಎಂಬ ಹಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅವರನ್ನು ಈ ಭಾಗದ ಜನ ಮತ್ತೊಮ್ಮೆ ಆಯ್ಕೆ ಮಾಡಬೇಕು ಎಂದು ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ನಗರ ಕಾಂಗ್ರೆಸ್ ಅಧ್ಯಕ್ಷ ಆರ್. ಮೂರ್ತಿ, ಜಿಲ್ಲಾಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್, ಕೆ.ಪಿ.ಸಿ.ಸಿ ಸದಸ್ಯರಾದ ಎನ್. ಭಾಸ್ಕರ್, ಅಕ್ಬರ್ ಅಲೀಂ, ನಾರಾಯಣಸ್ವಾಮಿ, ಕಾಂಗ್ರೆಸ್ ಮುಖಂಡರಾದ ರವಿ, ಮುನಿಯಪ್ಪ, ಸುನೀಲ್, ಕಾಂಗ್ರೆಸ್ ಯುವ ಮುಖಂಡ ನಾಗೇಶ್ ಕರುಯಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು.







