ವಾಯು ಮಾಲಿನ್ಯದಿಂದ ಹೃದ್ರೋಗ ಸಮಸ್ಯೆ ಹೆಚ್ಚಳ: ಡಾ.ಪದ್ಮನಾಭ ಕಾಮತ್
ಮಂಗಳೂರು, ಎ. 9: ಇತ್ತೀಚಿನ ದಿನಗಳಲ್ಲಿ ವಾಹನಗಳ ದಟ್ಟಣೆಯಿಂದ ನಗರದಲ್ಲಿ ಹೆಚ್ಚುತ್ತಿರುವ ವಾಯುಮಾಲಿನ್ಯ ಯುವಜನರಲ್ಲಿ ಹೃದ್ರೋಗ ಸಮಸ್ಯೆಗೆ ಒಂದು ಪ್ರಮುಖ ಕಾರಣವಾಗಿದೆ ಎನ್ನುವುದು ಖ್ಯಾತ ಹೃದ್ರೋಗ ತಜ್ಞರ ಅಭಿಪ್ರಾಯವಾಗಿದೆ ಎಂದು ನಗರದ ಖ್ಯಾತ ಹೃದ್ರೋಗ ತಜ್ಞ ಡಾ. ಪದ್ಮನಾಭ ಕಾಮತ್ ತಿಳಿಸಿದ್ದಾರೆ.
ನಗರದ ಪ್ರೆಸ್‌ಕ್ಲಬ್‌ನಲ್ಲಿಂದು ಮಾಧ್ಯಮ ಆರೋಗ್ಯ ತಪಾಸಣಾ ಕೇಂದ್ರಕ್ಕೆ ಇಸಿಜಿ ಯಂತ್ರವನ್ನು ಕೊಡುಗೆಯಾಗಿ ನೀಡಿದ ಬಳಿಕ ದಕ್ಷಿಣ ಕನ್ನಡ ಕಾರ್ಯ ನಿರತ ಪತ್ರಕರ್ತರ ಸಂಘದ ವತಿಯಿಂದ ಹಮ್ಮಿಕೊಂಡ ಮಾಧ್ಯಮ ಸಂವಾದ ಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತಿದ್ದರು.
ಯುವ ಜನರಲ್ಲಿ ಹೆಚ್ಚುತ್ತಿರುವ ಹೃದಯ ಸಂಬಂಧಿ ಕಾಯಿಲೆಗಳಿಗೆ ಹಲವಾರು ಕಾರಣಗಳಿವೆ.ತಂಬಾಕು,ಗುಟ್ಕಾ ಸೇರಿದಂತೆ ಮಾದಕವಸ್ತುಗಳ ಸೇವನೆ ಹೃದಯದ ಕಾಯಿಲೆಗೆ ಪ್ರಮುಖ ಕಾರಣವಾಗಿದೆ,ಆನುವಂಶಿಕವಾಗಿ ಬರುವ ಹೃದಯದ ಕಾಯಿಲೆಯ ಜೊತೆ,ಇಂದಿನ ಒತ್ತಡದಿಂದ ಕೂಡಿದ ಜೀವನ ಕ್ರಮ, ಆಹಾರ ಪದ್ಧತಿಗಳು ಹೃದ್ರೋಗ ಹೆಚ್ಚಲು ಕೆಲವು ಕಾರಣಗಳಾಗಿವೆ. ಹೃದಯಕ್ಕೆ ಸಂಬಂಧಿಸಿದ ತೊಂದರೆಗಳನ್ನು ಮುಂಚಿತವಾಗಿ ಗುರುತಿಸಿ ಚಿಕಿತ್ಸೆ ನೀಡಿದರೆ ಸಾಕಷ್ಟು ಜನರ ಜೀವ ಉಳಿಸಬಹುದು. ಈ ನಿಟ್ಟಿನಲ್ಲಿ ಮುಂಚಿತವಾಗಿ ಆರೋಗ್ಯತಪಾಸಣೆ,ಇಸಿಜಿ ಮಾಡಿಸುವ ಮೂಲಕ ಸಾಕಷ್ಟು ಹೃದಯ ಸಂಬಂಧಿಸಿದ ಸಮಸ್ಯೆ ಪರಿಹರಿಸಲು ಸಾಧ್ಯ ಎಂದು ಡಾ.ಪದ್ಮನಾಭ ಕಾಮತ್ ತಿಳಿಸಿದ್ದಾರೆ.
ರಾಜ್ಯದ ಗ್ರಾಮಾಂತರ ಪ್ರದೇಶ ಸೇರಿದಂತೆ ವಿವಿಧ ಕಡೆಗಳಿಗೆ ಸಾರ್ವಜನಿಕ ಸೇವೆಗೆ 141 ಇಸಿಜಿ ಯಂತ್ರ ವಿತರಣೆ:- ರಾಜ್ಯದ ಗ್ರಾಮಾಂತರ ಪ್ರದೇಶ ಸೇರಿದಂತೆ ಡಾ.ಪದ್ಮನಾಭ ಕಾಮತ್ 141 ಇಸಿಜಿ ಯಂತ್ರಗಳನ್ನು ಉಚಿತವಾಗಿ ವಿತರಿಸಿದ್ದು, ಈ ಯಂತ್ರಗಳ ಮೂಲಕ 131 ಹಳ್ಳಿಗಳಲ್ಲಿ ಇಸಿಜಿ ಯಂತ್ರ ವಿತರಿಸಲಾಗಿದೆ. ಇದರಿಂದ ಹೃದಯದ ಸಮಸ್ಯೆಯ ಬಗ್ಗೆ ಮುಂಚಿತವಾಗಿ ತಿಳಿದುಕೊಂಡು ವೈದ್ಯರ ಸಲಹೆ ಪಡೆಯುತ್ತಿದ್ದಾರೆ. ಗ್ರಾಮಾಂತರ ಪ್ರದೇಶದಲ್ಲಿ ಇಸಿಜಿ ಯಂತ್ರ ವಿತರಣೆಯ ಮೂಲಕ ಸಹಕಾರ ನೀಡುತ್ತಿದ್ದೇವೆ. ಇದು ದೊಡ್ಡ ಮಟ್ಟದಲ್ಲಿ ಪರಿಣಾಮ ಬೀರಬೇಕಾದರೆ ಮಾಧ್ಯಮಗಳ, ಸಮಾಜ ಸೇವಾ ಸಂಸ್ಥೆಗಳ ಪಾತ್ರ ಹಿರಿದು ಎಂದರು.ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸವಾಗಬೇಕಿದೆ ಎಂದು ಕೆಎಂಸಿ ಆಸ್ಪತ್ರೆಯ ಹೃದ್ರೋಗ ತಜ್ಞ ಡಾ. ಪದ್ಮನಾಭ ಕಾಮತ್ ಹೇಳಿದರು.
ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಪತ್ರಕರ್ತರು ಸಂಘದ ಸಾಮಾಜಿಕ ಕಳಕಳಿಯನ್ನು ಇಟ್ಟುಕೊಂಡು ಬ್ರ್ಯಾಂಡ್ ಮಂಗಳೂರು, ಗ್ರಾಮ ವಾಸ್ತವ್ಯ ಕಾರ್ಯಕ್ರಮ ನಡೆಸಿಕೊಂಡು ಬಂದಿದ್ದು, ಇದೀಗ ಪತ್ರಕರ್ತರ ಆರೋಗ್ಯ ಕಾಳಜಿ ದೃಷ್ಟಿಯಿಂದ ಮೀಡಿಯಾ ಹೆಲ್ತ್ ಕ್ಲಿನಿಕ್ ಆರಂಭಿಸಿದೆ. ಇದಕ್ಕೆ ಪದ್ಮನಾಭ ಕಾಮತ್ ಅವರು ಇಸಿಜಿ ಯಂತ್ರ ಕೊಡುಗೆಯಾಗಿ ನೀಡಿರುವುದು ಅನುಕೂಲವಾಗಿದೆ. ಮುಂದಿನ ದಿನಗಳಲ್ಲಿ ಈ ಸೇವೆಯನ್ನು ಸಾರ್ವಜನಿಕರಿಗೂ ವಿಸ್ತರಿಸುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಪ್ರೆಸ್ ಕ್ಲಬ್ ಅಧ್ಯಕ್ಷ ಅನ್ನು ಮಂಗಳೂರು, ಪತ್ರಿಕಾ ಭವನ ಟ್ರಸ್ಟ್ ಅಧ್ಯಕ್ಷ ಆನಂದ ಶೆಟ್ಟಿ, ಪತ್ರಕರ್ತರ ಸಂಘದ ಕಾರ್ಯದರ್ಶಿ ಇಬ್ರಾಹಿಂ ಅಡ್ಕಸ್ಥಳ ಉಪಸ್ಥಿತರಿದ್ದರು.ಪತ್ರಕರ್ತ ವಿಜಯ್ ಕೋಟ್ಯಾನ್ ಪಡು ಕಾರ್ಯಕ್ರಮ ನಿರೂಪಿಸಿದರು. ಭಾಸ್ಕರ ರೈ ಕಟ್ಟ ವಂದಿಸಿದರು.







