ಮುಖ್ಯಮಂತ್ರಿಯಿಂದ ಗೌಪ್ಯತೆ ಪ್ರಮಾಣ ಉಲ್ಲಂಘನೆ ಆರೋಪ: ಬಿಜೆಪಿಯಿಂದ ರಾಜ್ಯಪಾಲರಿಗೆ ದೂರು
![ಮುಖ್ಯಮಂತ್ರಿಯಿಂದ ಗೌಪ್ಯತೆ ಪ್ರಮಾಣ ಉಲ್ಲಂಘನೆ ಆರೋಪ: ಬಿಜೆಪಿಯಿಂದ ರಾಜ್ಯಪಾಲರಿಗೆ ದೂರು ಮುಖ್ಯಮಂತ್ರಿಯಿಂದ ಗೌಪ್ಯತೆ ಪ್ರಮಾಣ ಉಲ್ಲಂಘನೆ ಆರೋಪ: ಬಿಜೆಪಿಯಿಂದ ರಾಜ್ಯಪಾಲರಿಗೆ ದೂರು](/images/placeholder.jpg)
ಬೆಂಗಳೂರು, ಎ.9: ಮುಖ್ಯಮಂತ್ರಿ ಸ್ಥಾನದಲ್ಲಿರುವ ಎಚ್.ಡಿ.ಕುಮಾರಸ್ವಾಮಿ ಪ್ರಮಾಣ ವಚನ ಸ್ವೀಕರಿಸುವ ವೇಳೆ ಸ್ವೀಕರಿಸಿದ್ದ ಗೌಪ್ಯತೆ ಪ್ರಮಾಣವನ್ನು ಹಲವು ಬಾರಿ ಉಲ್ಲಂಘಿಸಿದ್ದಾರೆ ಎಂದು ರಾಜ್ಯ ಬಿಜೆಪಿ ನಿಯೋಗ ಮಂಗಳವಾರ ರಾಜ್ಯಪಾಲರಿಗೆ ದೂರು ಸಲ್ಲಿಸಿದೆ.
ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್, ಶಾಸಕ ಡಾ.ಸಿ.ಎನ್. ಅಶ್ವಥ್ ನಾರಾಯಣ್, ಬಿಜೆಪಿ ಸಹ ವಕ್ತಾರ ಎ.ಎಚ್.ಆನಂದ್ ನೇತೃತ್ವದ ಬಿಜೆಪಿ ನಿಯೋಗ ರಾಜ್ಯಪಾಲ ವಜುಭಾಯಿ ವಾಲಾರನ್ನು ಭೇಟಿ ಮಾಡಿ ದೂರು ಸಲ್ಲಿಸಿತು.
ರಾಜ್ಯಪಾಲರ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ರಾಜೀವ್ ಚಂದ್ರಶೇಖರ್, ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ದಾಳಿ ಮಾಡುತ್ತಾರೆ ಎಂದು ಒಂದು ದಿನದ ಮೊದಲೇ ಮುಖ್ಯಮಂತ್ರಿ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ ಎಂದರು.
ಅಲ್ಲದೇ, ಸಚಿವ ಸಂಪುಟದ ಬಹುತೇಕ ಸಚಿವರೊಂದಿಗೆ ಆದಾಯ ತೆರಿಗೆ ಇಲಾಖೆ ಎದುರು ಪ್ರತಿಭಟನೆಯನ್ನೂ ನಡೆಸಿದ್ದಾರೆ. ಪ್ರತಿಭಟನೆಯಿಂದ ಆದಾಯ ತೆರಿಗೆ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದಾರೆ. ಈ ಮೂಲಕ ದೇಶದ ಒಕ್ಕೂಟ ವ್ಯವಸ್ಥೆಗೆ ಚ್ಯುತಿ ತಂದಿದ್ದಾರೆ ಎಂದು ಅವರು ದೂರಿದರು.
ಅಲ್ಲದೇ, ದೇಶದ ಭದ್ರತೆ ವಿಷಯದಲ್ಲೂ ಮುಖ್ಯಮಂತ್ರಿ ಕುಮಾರಸ್ವಾಮಿ ತಪ್ಪು ಎಸಗಿದ್ದಾರೆ. ಪುಲ್ವಾಮ ದಾಳಿ, ಸರ್ಜಿಕಲ್ ಸ್ಟ್ರೈಕ್ ನಡೆಯುತ್ತೆ ಅಂತ ತಮಗೆ ಎರಡು ವರ್ಷಗಳ ಹಿಂದೆಯೇ ಗೊತ್ತಿತ್ತು. ಈ ವಿಷಯವನ್ನು ಸೇನಾಧಿಕಾರಿಯೊಬ್ಬರು ತಮಗೆ ತಿಳಿಸಿದ್ದರು ಎಂದು ಕುಮಾರಸ್ವಾಮಿ ಹೇಳಿದ್ದಾರೆ. ಈ ಮೂಲಕ ದೇಶದ ರಕ್ಷಣೆ ವಿಷಯದಲ್ಲೂ ಗೌಪ್ಯತೆ ಉಲ್ಲಂಘಿಸಿದ್ದಾರೆ ಎಂದು ಅವರು ಆರೋಪಿಸಿದರು.
ಗೌಪ್ಯತೆ ಪ್ರಮಾಣ ಉಲ್ಲಂಘಿಸಿರುವ ಮುಖ್ಯಮಂತ್ರಿ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ರಾಜ್ಯಪಾಲರಿಗೆ ಮನವಿ ಮಾಡಿದ್ದೇವೆ. ದೂರಿನ ಪ್ರತಿಯನ್ನು ಇಂದೇ ಕೇಂದ್ರ ಗೃಹ ಇಲಾಖೆಗೆ ಕಳುಹಿಸುವ ಭರವಸೆಯನ್ನು ರಾಜ್ಯಪಾಲರು ನೀಡಿದ್ದಾರೆ ಎಂದು ರಾಜೀವ್ ಚಂದ್ರಶೇಖರ್ ಹೇಳಿದರು.
ಡಾ.ಸಿ.ಎನ್.ಅಶ್ವಥ್ ನಾರಾಯಣ್ ಮಾತನಾಡಿ, ಪುಲ್ವಾಮ ದಾಳಿ, ಸರ್ಜಿಕಲ್ ಸ್ಟ್ರೈಕ್ ಬಗ್ಗೆ ಮೊದಲೇ ಗೊತ್ತಿತ್ತು ಎಂದು ಹೇಳುವ ಮೂಲಕ ಮುಖ್ಯಮಂತ್ರಿ ದೇಶಕ್ಕೆ ದ್ರೋಹ ಬಗೆಯುವ ಕೆಲಸ ಮಾಡಿದ್ದಾರೆ. ಪಾಕಿಸ್ತಾನ ಪರ ವಕಾಲತ್ತು ವಹಿಸುವಂತೆ ಮುಖ್ಯಮಂತ್ರಿ ಮಾತನಾಡಿದ್ದಾರೆ. ಕೇವಲ ಚುನಾವಣೆ ಗೆಲ್ಲುವುದಕ್ಕೆ ಮುಖ್ಯಮಂತ್ರಿ ಇಂತಹ ಹೇಳಿಕೆಗಳನ್ನು ನೀಡುವುದು ಖಂಡನೀಯ ಎಂದರು.