ಜಿಪಂ ಸದಸ್ಯನ ಕೊಲೆ ಪ್ರಕರಣದಲ್ಲಿ ನಾನು ಆರೋಪಿಯೇ ಅಲ್ಲ: ಮಾಜಿ ಸಚಿವ ವಿನಯ್ ಕುಲಕರ್ಣಿ
"ಪ್ರಹ್ಲಾದ್ ಜೋಶಿ ಕುತಂತ್ರದಿಂದ ನನ್ನ ವಿರುದ್ಧ ಪ್ರಕರಣ ದಾಖಲು"

ಧಾರವಾಡ, ಎ.9: ಜಿಪಂ ಸದಸ್ಯ ಯೋಗಿಶಗೌಡ ಕೊಲೆ ಪ್ರಕರಣದಲ್ಲಿ ನನ್ನ ವಿರುದ್ಧ ಪ್ರಕರಣ ದಾಖಲಿಸಲು ಪ್ರಹ್ಲಾದ್ ಜೋಶಿ ಕಾರಣರಾಗಿದ್ದಾರೆ. ಈ ಪ್ರಕರಣದಲ್ಲಿ ನಾನು ಆರೋಪಿಯೇ ಅಲ್ಲ. ಆದರೂ ಚುನಾವಣಾ ಸ್ವಾರ್ಥಕ್ಕಾಗಿ ಎಫ್‌ಐಆರ್ ದಾಖಲಾಗಿದೆ ಎಂದು ಕಾಂಗ್ರೆಸ್ ಅಭ್ಯರ್ಥಿ ವಿನಯ್ ಕುಲಕರ್ಣಿ ಆರೋಪಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ವಿರುದ್ಧ ಪ್ರಕರಣ ದಾಖಲಿಸಿರುವ ಗುರುನಾಥ ಗೌಡ ಯಾವಾಗಲೂ ಪ್ರಹ್ಲಾದ್ ಜೋಶಿ ಜೊತೆಯೇ ಇರುತ್ತಾರೆ. ಈ ಪ್ರಕರಣದಲ್ಲಿ ನಾನು ಆರೋಪಿಯೇ ಅಲ್ಲ. ಎಫ್‌ಐಆರ್‌ನಲ್ಲಿಯೂ ನನ್ನ ಹೆಸರು ಇಲ್ಲ. ಚಾರ್ಜ್‌ಶೀಟ್‌ನಲ್ಲಿಯೂ ಇಲ್ಲ. ಆದರೂ ಚುನಾವಣಾ ಸಂದರ್ಭದಲ್ಲಿ ಪ್ರಹ್ಲಾದ್ ಜೋಶಿ ಕುತಂತ್ರ ರಾಜಕಾರಣ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಬಿಜೆಪಿ ನಾಯಕರಿಗೆ ಧಾರವಾಡದಲ್ಲಿ ಏನು ಆದರೂ ವಿನಯ್ ಕುಲಕರ್ಣಿ ಮಾತ್ರ ಕಾಣಿಸುತ್ತಾರೆ. ಒಂದು ಮನೆಯನ್ನು ಇಬ್ಭಾಗ ಮಾಡುವಂತಹ ಕುತಂತ್ರಿ ರಾಜಕಾರಣಿ ಪ್ರಹ್ಲಾದ್ ಜೋಶಿ. ಈ ಪ್ರಕರಣ ನಡೆದು ಎರಡ್ಮೂರು ವರ್ಷ ಕಳೆದ ಮೇಲೆ ಈಗ ಮತ್ತೆ ವಿಚಾರ ಎತ್ತಿದ್ದಾರೆ ಎಂದು ಅವರು ವಾಗ್ದಾಳಿ ನಡೆಸಿದರು.
ಏನಿದು ಪ್ರಕರಣ?: ಜಿಪಂ ಸದಸ್ಯ ಯೋಗೀಶಗೌಡ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ಆರು ಜನ ಆರೋಪಿಗಳು ತಾವೇ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ. ಆದರೂ ಈ ಕೊಲೆ ಪ್ರಕರಣದಲ್ಲಿ ಮಾಜಿ ಸಚಿವ ವಿನಯ್ ಕುಲಕರ್ಣಿ ಕೈವಾಡ ಇದೆ ಎಂದು ಯೋಗೀಶಗೌಡರ ಪತ್ನಿ ಮಲ್ಲಮ್ಮ ಸಂಶಯ ವ್ಯಕ್ತಪಡಿಸಿದ್ದರು.







