ಕಾಂಗ್ರೆಸ್ ಬೆಂಬಲವಿಲ್ಲದೆ ಯಾವುದೇ ಪಕ್ಷ ಸರಕಾರ ರಚಿಸಲು ಸಾಧ್ಯವಿಲ್ಲ: ದೇವೇಗೌಡ

ಅಮರಾವತಿ,ಎ.9: ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲು ನಿಶ್ಚಿತ ಎಂದು ಭವಿಷ್ಯ ನುಡಿದಿರುವ ಮಾಜಿ ಪ್ರಧಾನಿ ಮತ್ತು ಜಾತ್ಯತೀತ ಜನತಾದಳದ ಅಧ್ಯಕ್ಷ ಎಚ್.ಡಿ ದೇವೇಗೌಡ, ಆದರೆ ಕಾಂಗ್ರೆಸ್ ಪಕ್ಷದ ಬೆಂಬಲವಿಲ್ಲದೆ ಕೇಂದ್ರದಲ್ಲಿ ಸರಕಾರ ರಚಿಸಲು ಯಾವ ಪಕ್ಷದಿಂದಲೂ ಸಾಧ್ಯವಿಲ್ಲ ಎಂದು ಅಭಿಪ್ರಾಯಿಸಿದ್ದಾರೆ.
ಆಂಧ್ರ ಪ್ರದೇಶದ ಕೃಷ್ಣ ಜಿಲ್ಲೆಯ ತಿರುವೂರ್‌ನಲ್ಲಿ ತೆಲುಗು ದೇಶಂ ಪಕ್ಷದ ಪದ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಿದ ದೇವೇಗೌಡ, 1996-98ರ ಮಧ್ಯೆ ಕಾಂಗ್ರೆಸ್ ಬೆಂಬಲದೊಂದಿಗೆ ಬಿಜೆಪಿಯೇತರ ಮೈತ್ರಿಕೂಟ ಯುನೈಟೆಡ್ ಫ್ರಂಟ್ ಸರಕಾರ ರಚಿಸಿರುವುದನ್ನು ಅವರು ಉಲ್ಲೇಖಿಸಿದ್ದಾರೆ. ಪ್ರಾದೇಶಿಕ ಪಕ್ಷಗಳೂ ಅಧಿಕಾರಕ್ಕೇರಬಹುದು ಎಂಬುದನ್ನು ಒಕ್ಕೂಟ ರಂಗ ಸರಕಾರ ಸಾಬೀತುಪಡಿಸಿದೆ. ಹಾಗಾಗಿ ಎಲ್ಲ ಪ್ರಾದೇಶಿಕ ಪಕ್ಷಗಳು ಒಂದಾಗಿ ಬಿಜೆಪಿಯಿಂದ ಅಧಿಕಾರವನ್ನು ಕಿತ್ತುಕೊಳ್ಳಲು ಇದು ಸಕಾಲ. ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು ಆ ಸಮಯದಲ್ಲಿ ಕೇಂದ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದರು ಮತ್ತು ಎಲ್ಲ ಪಕ್ಷಗಳನ್ನು ಒಂದೇ ವೇದಿಕೆಗೆ ತರುವಲ್ಲಿ ಮಹತ್ವದ ಪಾತ್ರ ನಿಭಾಯಿಸಿದ್ದಾರೆ ಎಂದು ದೇವೇಗೌಡ ತಿಳಿಸಿದ್ದಾರೆ.
ನಾಯ್ಡುವನ್ನು ಮುಂದಿನ ಪ್ರಧಾನಿ ಎಂದು ಸಂಬೋಧಿಸಿದ ದೇವೇಗೌಡ, ಚಂದ್ರಬಾಬು ನಾಯ್ಡು ಪ್ರಧಾನಿ ಮೋದಿಯ ದುರಾಡಳಿತದ ವಿರುದ್ಧ ಹೋರಾಡುತ್ತಲೇ ಬಂದಿದ್ದಾರೆ. ಅವರಿಗೆ ಪ್ರಧಾನಿಯಾಗುವ ಎಲ್ಲ ಅರ್ಹತೆಯೂ ಇದೆ ಎಂದು ತಿಳಿಸಿದ್ದಾರೆ.





