ನನ್ನೊಂದಿಗೆ ಬಹಿರಂಗ ಚರ್ಚೆಗೆ ಬನ್ನಿ: ಪ್ರಧಾನಿಗೆ ರಾಹುಲ್ ಸವಾಲು

ಹೊಸದಿಲ್ಲಿ,ಎ.9: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮಂಗಳವಾರ ಪ್ರಧಾನಿ ಮೋದಿಗೆ ತೆರೆದ ಪುಸ್ತಕ ಸವಾಲೆಸೆದಿದ್ದು ಬಹಿರಂಗ ಚರ್ಚೆಗೆ ಆಹ್ವಾನಿಸಿದ್ದಾರೆ.
ಮೋದಿಗೆ ಭಯವಾಗಿದೆ ಎಂದು ಕುಟುಕಿರುವ ರಾಹುಲ್ ಗಾಂಧಿ, ರಾಜಕೀಯ ಚರ್ಚೆಗೆ ಮೂರು ವಿಷಯಗಳನ್ನು ಆಯ್ಕೆ ಮಾಡಿದ್ದಾರೆ. ಪ್ರಧಾನಿ ಮೋದಿ ರಫೇಲ್ ಒಪ್ಪಂದದಲ್ಲಿ ಕೈಗಾರಿಕೋದ್ಯಮಿ ಅನಿಲ್ ಅಂಬಾನಿಗೆ ಲಾಭ ಮಾಡಿದ್ದಾರೆ. ಈ ಒಪ್ಪಂದದಲ್ಲಿ ಫ್ರಾನ್ಸ್‌ನ ಡಸಾಲ್ಟ್ ವೈಮಾನಿಕ ಸಂಸ್ಥೆಯ ಭಾರತೀಯ ಜೊತೆಗಾರ ಸಂಸ್ಥೆಯಾಗಿ ರಿಲಾಯನ್ಸ್ ಡಿಫೆನ್ಸನ್ನು ಆಯ್ಕೆ ಮಾಡುವಂತೆ ಮಾಡುವ ಮೂಲಕ ಮೋದಿ, ರಿಲಾಯನ್ಸ್ 30,000 ಕೋಟಿ ರೂ. ಒಪ್ಪಂದ ಬಾಚಿಕೊಳ್ಳುವಂತೆ ನೋಡಿಕೊಂಡಿದ್ದಾರೆ ಎಂದು ಕಾಂಗ್ರೆಸ್ ಅಧ್ಯಕ್ಷ ದೂರಿದ್ದಾರೆ.
ವಜ್ರಾಭರಣ ವ್ಯಾಪಾರಿ ನೀರವ್ ಮೋದಿ ಪಂಜಾಬ್ ನ್ಯಾಶನಲ್ ಬ್ಯಾಂಕ್‌ಗೆ 14,000 ಕೋಟಿ ರೂ. ವಂಚಿಸಿರುವ ಪ್ರಕರಣದಲ್ಲೂ ಪ್ರಧಾನಿ ವಿರುದ್ಧ ಕಿಡಿಕಾರಿರುವ ರಾಹುಲ್ ಗಾಂಧಿ, ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರ ಆರೋಪಿ ನೀರವ್ ಮೋದಿ ಬಗ್ಗೆ ಮೃದು ಧೋರಣೆ ತಳೆದಿದೆ ಎಂದು ಆರೋಪಿಸಿದ್ದಾರೆ. ನೋಟು ಅಮಾನ್ಯ ವಿಷಯದಲ್ಲೂ ಕಾಂಗ್ರೆಸ್ ಮತ್ತು ಬಿಜೆಪಿ ಮಧ್ಯೆ ವಾಗ್ವಾದ ನಡೆಯುತ್ತಲೇ ಇದ್ದು, ಈ ವಿಷಯದ ಮೇಲೂ ಚರ್ಚೆ ನಡೆಸಬೇಕು ಎಂದು ರಾಹುಲ್ ಗಾಂಧಿ ಆಗ್ರಹಿಸಿದ್ದಾರೆ.





