ಎರಡು ಕ್ಷೇತ್ರಗಳಿಂದ ರಾಹುಲ್ ಸ್ಪರ್ಧೆ ತಪ್ಪಲ್ಲ: ಪ್ರಧಾನಿ ಮೋದಿ

ಹೊಸದಿಲ್ಲಿ,ಎ.9: ಕೇರಳದ ವಯನಾಡಿನಿಂದ ಲೋಕಸಭಾ ಚುನಾವಣೆಯನ್ನು ಎದುರಿಸುತ್ತಿರುವುದಕ್ಕಾಗಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರ ವಿರುದ್ಧ ಪದೇಪದೇ ದಾಳಿ ನಡೆಸುತ್ತಿದ್ದರೂ ಪ್ರಧಾನಿ ನರೇಂದ್ರ ಮೋದಿ ಅವರು,ಎರಡು ಲೋಕಸಭಾ ಕ್ಷೇತ್ರಗಳಿಂದ ಸ್ಪರ್ಧಿಸುವ ಅವರ ನಿರ್ಧಾರಕ್ಕೆ ತನ್ನ ಆಕ್ಷೇಪವಿಲ್ಲ ಎಂದು ಹೇಳಿದ್ದಾರೆ.
ಯಾರೇ ಆದರೂ ಎರಡು ಕ್ಷೇತ್ರಗಳಿಂದ ಸ್ಪರ್ಧಿಸಲು ಸಂವಿಧಾನವು ಅವಕಾಶ ನೀಡಿರುವುದರಿಂದ ರಾಹುಲ್ ಆಯ್ಕೆಯಲ್ಲಿ ಯಾವುದೇ ತಪ್ಪು ಇಲ್ಲ ಎಂದು ಆಂಗ್ಲ ಸುದ್ದಿವಾಹಿನಿಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಹೇಳಿದ ಮೋದಿ, ಆದರೆ ಅವರ ಈ ನಿರ್ಧಾರದೊಂದಿಗೆ ಇನ್ನೊಂದು ವಿಷಯವು ತಳುಕು ಹಾಕಿಕೊಂಡಿದೆ. ಅವರು ಅಮೇಠಿಯಿಂದ ಪಲಾಯನಗೈಯ್ಯಲು ಕಾರಣವಾದ ಸ್ಥಿತಿಯು ಅಸಲಿ ವಿಷಯವಾಗಿದೆ. ಗಾಂಧಿ ಕುಟುಂಬದ ಖಾಸಾ ಆಸ್ತಿಯಾಗಿರುವ ಕ್ಷೇತ್ರದಿಂದ ಪಲಾಯನಗೈದಿರುವುದು ಖಂಡಿತವಾಗಿ ಚರ್ಚೆಗೊಳಗಾಗಬೇಕಾದ ವಿಷಯವಾಗಿದೆ ಎಂದರು.
ಅಮೇಠಿ ಕ್ಷೇತ್ರದ ಜೊತೆಗೆ ವಯನಾಡ್ ಕ್ಷೇತ್ರದಿಂದಲೂ ಸ್ಪರ್ಧಿಸುವ ರಾಹುಲ್ ನಿರ್ಧಾರ ವಿವಾದವನ್ನು ಸೃಷ್ಟಿಸಿದೆ. ವಯನಾಡಿನಲ್ಲಿ ಹಿಂದುಗಳು ಅಲ್ಪಸಂಖ್ಯಾತರಾಗಿರುವುದರಿಂದ ರಾಹುಲ್ ಸುರಕ್ಷಿತವಾದ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡಿದ್ದಾರೆ ಎಂದು ಸ್ವತಃ ಮೋದಿ ಅವರೇ ಚುನಾವಣಾ ರ್ಯಾಲಿಗಳಲ್ಲಿ ಟೀಕಿಸುತ್ತಿದ್ದಾರೆ. ಈ ವಿಷಯದಲ್ಲಿ ಅವರ ಪಕ್ಷದ ಇತರ ನಾಯಕರೂ ಹಿಂದೆ ಬಿದ್ದಿಲ್ಲ.
ನಿಮ್ಮ ಅಧಿಕಾರಾವಧಿಯಲ್ಲಿ ಗಾಂಧಿ ಕುಟುಂಬದ ಹೆಸರುಗಳನ್ನು ನೀವೇಕೆ ಅಷ್ಟೊಂದು ಸಲ ಎತ್ತಿದ್ದೀರಿ ಎಂಬ ಪ್ರಶ್ನೆಗೆ ಮೋದಿ,ತಾನೆಂದೂ ಅವರ ವಿರುದ್ಧ ವೈಯಕ್ತಿಕ ದಾಳಿಯನ್ನು ನಡೆಸಿರಲಿಲ್ಲ ಮತ್ತು ಸೈದ್ಧಾಂತಿಕವಾಗಿ ಮಾತ್ರ ಅವರನ್ನು ವಿರೋಧಿಸಿದ್ದೆ. ವಂಶ ರಾಜಕಾರಣವು ಭಾರತದ ಪ್ರಜಾಪ್ರಭುತ್ವಕ್ಕೆ ಕೆಟ್ಟದ್ದು ಎನ್ನುವುದು ಸೈದ್ಧಾಂತಿಕ ನಂಬಿಕೆಯಾಗಿದೆ ಎಂದು ಉತ್ತರಿಸಿದರು.







