ಉದ್ಯೋಗ ಕಳೆದುಕೊಳ್ಳುವಂತೆ ಮಾಡಿದ್ದೇ ಮೋದಿ ಸರ್ಕಾರದ ಸಾಧನೆ: ಮಾಜಿ ಸಿಎಂ ಸಿದ್ದರಾಮಯ್ಯ

ಚಿಕ್ಕಬಳ್ಳಾಪುರ,ಎ.9: ನೀಡಿದ ಭರವಸೆಗಳನ್ನು ಈಡೇರಿಸುವಲ್ಲಿ ವಿಫಲರಾಗಿ ತಮ್ಮ ಮುಖಗಳನ್ನು ತೋರಿಸಲಾರದ ಬಿಜೆಪಿ ಮುಖಂಡರು ಮೋದಿ ಮುಖನೋಡಿ ಮತ ಹಾಕುವಂತೆ ಹೇಳುತ್ತಿದ್ದು, ಜೈಲಿಗೆ ಹೋದವರೆಲ್ಲರೂ ಚೌಕಿದಾರರು. ನಾಚಿಕೆ ಆಗಲ್ವಾ, ಮಾನ ಮಾರ್ಯಾದೆ ಇದೆಯಾ ಇವರಿಗೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿ ಕಾರಿದರು.
ನಗರ ಹೊರವಲಯದಲ್ಲಿ ಮಂಗಳವಾರ ಆಯೋಜಿಸಿದ್ದ ಬೃಹತ್ ರಾಜಕೀಯ ಸಮಾವೇಶದಲ್ಲಿ ಮಾತನಾಡಿದ ಅವರು, ಅಮಿತ್ ಶಾ, ಯಡಿಯೂರಪ್ಪ, ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಸೇರಿದಂತೆ ಎಲ್ಲರೂ ಜೈಲಿಗೆ ಹೋಗಿಬಂದಿದ್ದು, ಇವರೆಲ್ಲ ಈಗ ಚೌಕಿದಾರರಾಗಿದ್ದಾರೆ ಎಂದು ಗೇಲಿ ಮಾಡಿದರು.
ದೇಶದ ಪ್ರತಿಯೊಬ್ಬರ ಖಾತೆಗೆ 15 ಲಕ್ಷ ಜಮೆ ಮಾಡುವುದಾಗಿ ಹೇಳಿದ್ದರು. ಆದರೆ ಈವರೆಗೂ ಇದು ನಡೆದಿಲ್ಲ. ಐದು ವರ್ಷದಲ್ಲಿ 10 ಕೋಟಿ ಉದ್ಯೋಗ ಸೃಷ್ಟಿ ಮಾಡುವುದಾಗಿ ಹೇಳಿದ್ದರು. ಆದರೆ 1.8 ಕೋಟಿ ಉದ್ಯೋಗ ಕಳೆದುಕೊಳ್ಳುವಂತೆ ಮಾಡಿರುವುದೇ ಕೇಂದ್ರದ ಮೋದಿ ನೇತೃತ್ವದ ಬಿಜೆಪಿ ಸರ್ಕಾರದ ಸಾಧನೆ ಎಂದು ಲೇವಡಿ ಮಾಡಿದರು.
ಕೇಂದ್ರದಲ್ಲಿ ಮತ್ತೆ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಲ್ಲಿ ಸಾಮಾಜಿಕ ನ್ಯಾಯಕ್ಕೆ ಕೊಡಲಿ ಪೆಟ್ಟು ಬೀಳಲಿದೆ. ರೈತರು ಕಣ್ಣೀರಿನಲ್ಲಿ ಕೈ ತೊಳೆಯಬೇಕಾದ ಸ್ಥಿತಿ ನಿರ್ಮಾಣವಾಗಲಿದೆ. ರಾಜ್ಯದ ರೈತರ ಸಮಸ್ಯೆಗಳ ಪರಿಹಾರಕ್ಕೆ ಪ್ರಧಾನಿಗಳ ಬಳಿ ಸರ್ವ ಪಕ್ಷಗಳ ನಿಯೋಗ ಕರೆದೊಯ್ದು ಗೋಗೆರೆದರೂ ಪ್ರಧಾನಿ ಮೋದಿ ಒಪ್ಪಲಿಲ್ಲ. ರಾಜ್ಯದ ರೈತರ ಸಾಲ ಮನ್ನಾ ಮಾಡುವಂತೆ ಕೇಳಿದರೆ ಯಡಿಯೂರಪ್ಪನವರು ಗಮನ ನೀಡಲಿಲ್ಲ. ಇಂತಹವರಿಗೆ ಮತ್ತೆ ಮತ ನೀಡಬೇಡಿ ಎಂದು ಮನವಿ ಮಾಡಿದರು.
ಜಾತಿ ಮುಖ್ಯವಲ್ಲ, ಜಾತಿ ನೋಡಿ ಮತ ಹಾಕಬೇಡಿ. ಮೋದಿ ಈ ಜಿಲ್ಲೆಗೆ ಏನು ಮಾಡಿದ್ದಾರೆ, ಬಿ.ಎನ್. ಬಚ್ಚೇಗೌಡರು ಏನು ಮಾಡಿದ್ದಾರೆ. ಶ್ರೀಮಂತರ ಕಪ್ಪು ಹಣ ಬಿಳಿ ಮಾಡಿಕೊಳ್ಳುವ ಉದ್ದೇಶದಿಂದ ಪ್ರಧಾನಿ ಮೋದಿ ನೋಟ್ ಬ್ಯಾನ್ ಮಾಡಿದರು. ಇದರಲ್ಲಿ ಶೇ.99.9 ರಷ್ಟು ಹಣ ಬ್ಯಾಂಕಿಗೆ ಬಂದಿದೆ. ಹಾಗಾದರೆ ಕಪ್ಪು ಹಣ ಎಲ್ಲಿ ಎಂದು ಪ್ರಶ್ನಿಸಿದರು.
ಬಿಜೆಪಿ ನಡೆಸುತ್ತಿರುವುದು ಡೋಂಗಿ ರಾಜಕಾರಣ. ಎತ್ತಿನಹೊಳೆ ಯೋಜನೆ ಜಾರಿಗೆ ತಂದಿದ್ದು ನಾನು. ಶಾಸಕ ಸುಧಾಕರ್ ಅವರ ಒತ್ತಡದ ಮೇರೆಗೆ ಈ ಯೋಜನೆಗೆ 13 ಸಾವಿರ ಕೋಟಿ ಅನುದಾನ ನೀಡಲಾಗಿದೆ. ನಂತರ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳ ಬರ ಪರಿಸ್ಥಿತಿ ನಿಯಂತ್ರಿಸಲು ಎಚ್‍ಎನ್ ವ್ಯಾಲಿ ಮತ್ತು ಕೆಸಿ ವ್ಯಾಲಿ ಯೋಜನೆಗಳನ್ನು ಜಾರಿಗೆ ತರಲಾಗಿದೆ. ಆದರೆ ಪುಣ್ಯಾತ್ಮರು ಇದಕ್ಕೆ ನ್ಯಾಯಾಲಯದಿಂದ ತಡೆ ತಂದಿದ್ದರು. ಈಗ ತಡೆ ತೆರವುಗೊಳಿಸಲಾಗಿದ್ದು, ಶೀಘ್ರದಲ್ಲಿಯೇ ನೀರು ಬರಲಿದೆ ಎಂದು ಹೇಳಿದರು. ಹಾಗಾಗಿ ಬಿಜೆಪಿ ಡೋಂಗಿ ಮಾತುಗಳಿಗೆ ಮರಳಾಗದೆ ವೀರಪ್ಪ ಮೊಯ್ಲಿ ಅವರಿಗೆ ಮತ ನೀಡಿ ಲೋಕಸಬೆಗೆ ಕಳುಹಿಸುವಂತೆ ಮನವಿ ಮಾಡಿದರು.
ಶಾಸಕ ಡಾ.ಕೆ. ಸುಧಾಕರ್ ಮಾತನಾಡಿ, ದೇಶದಲ್ಲಿ ಸಮಾಜಿಕ ನ್ಯಾಯ ಉಳಿಯಲು ಮತ್ತು ಸಂವಿಧಾನಕ್ಕೆ ಬಲ ನೀಡಲು ಪ್ರತಿಯೊಬ್ಬರೂ ವೀರಪ್ಪಮೊಯ್ಲಿ ಅವರಿಗೆ ಮತ ನೀಡಬೇಕು ಎಂದು ಮನವಿ ಮಾಡಿದರು. ಕಳೆದ 5 ವರ್ಷಗಳ ಕೇಂದ್ರ ಬಿಜೆಪಿ ಸರ್ಕಾರದ ಅವಧಿಯಲ್ಲಿ ಬಡವರು ಮತ್ತಷ್ಟು ಬಡವರಾಗಿದ್ದರೆ ಶ್ರೀಮಂತರು ಮತ್ತಷ್ಟು ಶ್ರೀಮಂತರಾಗಿದ್ದಾರೆ. ಬಡವರು ಮತ್ತು ಶ್ರೀಮಂತರ ನಡುವಿನ ಅಂತರ ಹೆಚ್ಚಾಗಿರುವುದು ಆತಂಕಕಾರಿ ವಿಚಾರ ಎಂದರು.
ಕಾರ್ಯಕ್ರಮದಲ್ಲಿ ಮಾಜಿ ಶಾಸಕಿ ಅನಸೂಯಮ್ಮ, ಜಿ.ಪಂ ಸದಸ್ಯ ಪಿ.ಎನ್. ಕೇಶವರೆಡ್ಡಿ, ಕೋಚಿಮುಲ್ ನಿರ್ದೇಶಕ ಕೆ.ವಿ. ನಾಗರಾಜ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಎನ್. ಕೇಶವರೆಡ್ಡಿ ಸೇರಿದಂತೆ ಇತರರು ಇದ್ದರು.







