ಮಾಧ್ಯಮಗಳು ಪ್ರಧಾನಿಯನ್ನು ನಾಯಕನನ್ನಾಗಿ ಬಿಂಬಿಸುವ ಕೆಲಸ ಮಾಡುತ್ತಿವೆ: ಮಾಜಿ ಪ್ರಧಾನಿ ದೇವೇಗೌಡ

ಚಿಕ್ಕಬಳ್ಳಾಪುರ,ಎ.9: ಪ್ರಸ್ತುತ ರಾಹುಲ್ ಗಾಂಧಿ ಶಕ್ತಿ ಬೆಳೆಸಿಕೊಂಡಿದ್ದರೂ ಮಾಧ್ಯಮಗಳು ಅವರನ್ನು ಬಿಂಬಿಸುವ ಕೆಲಸ ಮಾಡುತ್ತಿಲ್ಲ, ದೇಶದ ಒಂದೆರಡು ಮಾಧ್ಯಮಗಳು ಹೊರತುಪಡಿಸಿ ಉಳಿದೆಲ್ಲ ಮಾಧ್ಯಮಗಳೂ ಪ್ರಧಾನಿ ನರೇಂದ್ರ ಮೋದಿ ಅವರನ್ನು ನಾಯಕನನ್ನಾಗಿ ಮಾಡುತ್ತಿವೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಬೇಸರ ವ್ಯಕ್ತಪಡಿಸಿದರು.
ನಗರ ಹೊರವಲಯದ ರಿಲಿಯನ್ಸ ಪೆಟ್ರೋಲ್ ಬಂಕ್ ಹಿಂಭಾಗದ ಮೈದಾನದಲ್ಲಿ ಮಂಗಳವಾರ ಆಯೋಜಿಸಿದ್ದ ರಾಜಕೀಯ ಸಮಾವೇಶದಲ್ಲಿ ಮಾತನಾಡಿದ ಅವರು, ಹೆಚ್ಚು ಪ್ರಾಮುಖ್ಯತೆಯನ್ನು ಪ್ರಧಾನಿ ಮೋದಿ ಅವರಿಗೆ ಮಾಧ್ಯಮಗಳು ನೀಡುತ್ತಿರುವುದು ಸರಿಯಲ್ಲ ಎಂದರು.
ನೆರೆಯ ಆಂಧ್ರಪ್ರದೇಶದಲ್ಲಿ ಶೇ.65ಕ್ಕೂ ಹೆಚ್ಚು ಪ್ರದೇಶಕ್ಕೆ ನೀರಾವರಿ ಒದಗಿಸಲಾಗಿದೆ. ಆದರೆ ರಾಜ್ಯದಲ್ಲಿ ಇದು ಯಾಕೆ ಸಾಧ್ಯವಾಗಿಲ್ಲ ಎಂದು ಪ್ರಶ್ನಿಸಿದ ಅವರು, ಕಾವೇರಿ ನೀರಿನ ವಿಚಾರವಾಗಿ ತಾನು ಉಪವಾಸ ಸತ್ಯಾಗ್ರಹಕ್ಕೂ ಸಿದ್ದನಾಗಿದ್ದೆ. ಆದರೆ ನಂತರದ ಬೆಳವಣಿಗೆಗಳು ಅದಕ್ಕೆ ಆಸ್ಪದ ನೀಡಲಿಲ್ಲ. ಈ ಬಗ್ಗೆ ಚರ್ಚೆ ಬೇಡ ಎಂದು ಹೇಳಿದರು.
ಮಹಿಳೆಯರಿಗೆ ಶೇ.33 ಮೀಸಲಾತಿ ನೀಡಿದ್ದು ನಾವು. ಆದರೆ ಅಂದಿನಿಂದ ಅದು ಸಂಸತ್‍ನಲ್ಲಿ ನಿರ್ಣಯ ಆಗಲೇ ಇಲ್ಲ. ಆದರೆ ಈಗ ರಾಹುಲ್ ಗಾಂಧಿ ಅವರು ಶೇ.33 ಮೀಸಲಾತಿ ಮಹಿಳೆಯರಿಗೆ ನೀಡಲು ಬದ್ದರಿರುವುದಾಗಿ ಹೇಳಿದ್ದು, ಕೇಂದ್ರದಲ್ಲಿ ಯುಪಿಎ ಸರ್ಕಾರ ಅಧಿಕಾರಕ್ಕೆ ಬಂದಲ್ಲಿ ಅದು ಏನಾಗಲಿದೆ ಎಂಬುದನ್ನು ನೋಡೋಣ ಎಂದು ಹೇಳಿದರು.
ಐಕ್ಯತೆಯಿಂದ ಚುನಾವಣೆ ಎದುರಿಸಿ
ಮೈತ್ರಿ ಪಕ್ಷಗಳಲ್ಲಿ ಸ್ಥಳೀಯವಾದ ಭಿನ್ನಾಭಿಪ್ರಾಯಗಳಿರುವುದು ಸಹಜ. ಆದರೆ ವೈಯಕ್ತಿಕ ಭಿನ್ನಾಭಿಪ್ರಾಯಗಳನ್ನು ಬಿಟ್ಟರೆ ಗೆಲುವು ನಮ್ಮದಾಗಲಿದೆ. ಹಾಗಾಗಿ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಐಕ್ಯತೆಯಿಂದ ಪ್ರಸ್ತುತ ಚುನಾವಣೆಯಲ್ಲಿ ಶ್ರಮಿಸಿದರೆ ವೀರಪ್ಪ ಮೊಯ್ಲಿ ಅವರು 1.5 ಲಕ್ಷ ಮತಗಳ ಅಂತರದಲ್ಲಿ ಗೆಲವು ಸಾಧಿಸಲಿದ್ದಾರೆ. ಮೊಯ್ಲಿ ಅವರು ಅನುಭವಿ ರಾಜಕಾರಣಿಯಾಗಿದ್ದು, ಸಂಸದರ ಸ್ಥಾನಕ್ಕೆ ಯೋಗ್ಯರಿದ್ದಾರೆ. ಹಾಗಾಗಿ ಉಭಯ ಪಕ್ಷಗಳ ಮುಖಂಡರೂ ಮೊಯ್ಲಿ ಗೆಲುವಿಗೆ ಶ್ರಮಿಸುವಂತೆ ಕೋರಿದರು.
ಮೈತ್ರಿಗೆ ಕಾರಣ ಸೋನಿಯಾ, ರಾಹುಲ್: ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ರಚನೆಯಾಗಲು ಸೋನಿಯಾಗಾಂಧಿ ಮತ್ತು ರಾಹುಲ್ ಗಾಂಧಿ ಕಾರಣ. ಅವರೇ ನಿರ್ಣಯ ಕೈಗೊಂಡು ತಮ್ಮ ಪ್ರತಿನಿಧಿಗಳನ್ನು ಕಳುಹಿಸಿ ಸರ್ಕಾರ ರಚಿಸುವಂತೆ ಕೋರಿದ್ದು, ನಂತರ ಲೋಕಸಭಾ ಚುನಾವಣೆಯಲ್ಲಿಯೂ ಮೈತ್ರಿ ಮುಂದುವರಿಸಲಾಗಿದೆ. ಈ ಹಿಂದೆ ನಡೆದ ಉಪ ಚುನಾವಣೆ ಮತ್ತು ಪಂಚ ರಾಜ್ಯಗಳ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬೃಹತ್ ಪೆಟ್ಟು ಬಿದ್ದಿದ್ದು, ಪ್ರಸ್ತುತ ಚುನಾವಣೆಯಲ್ಲಿ ಅವರ ಗೆಲುವು ಸಾಧ್ಯವಿಲ್ಲ ಎಂದು ಹೇಳಿದರು.
ಮೋದಿ ಎಂದು ಕೂಗುವ ಸನ್ನಿವೇಶ: ದೇಶದಲ್ಲಿ ಪ್ರಸ್ತುತ ಯುವಕರು ಯಾವುದೇ ಕಾರ್ಯಕ್ರಮ ಇದ್ದರೂ ಮೋದಿ ಮೋದಿ ಎಂದು ಕೂಗುವ ಸನ್ನಿವೇಶ ನಿರ್ಮಾಣವಾಗಿದೆ. ಇದಕ್ಕೆ ಕಾರಣ ಅವರಲ್ಲಿ ಆರೆಸ್ಸೆಸ್ ಮತ್ತು ಸಂಘಪರಿವಾರದವರಿದ್ದಾರೆ. ಆದರೆ ನಮ್ಮಲ್ಲಿ ಇಲ್ಲ. ಜೊತೆಗೆ ಸಾಮಾಜಿಕ ಜಾಲತಾಣಗಳಲ್ಲಿ ಬಿಜೆಪಿ ಮುಂದಿದೆ. ಇದರಿಂದಾಗಿ ಹೆಚ್ಚಿನ ಯುವಕರು ಆಕರ್ಷಿತರಾಗುತ್ತಿದ್ದಾರೆ ಎಂದು ಹೇಳಿದರು.
ಮಹಾಘಟಬಂಧನ್‍ಗೆ ಗೆಲುವು: ದೇಶದ ಆರು ಮುಖ್ಯಮಂತ್ರಿಗಳು, ನಾನಾ ರಾಜ್ಯಗಳ ಪ್ರಾದೇಶಿಕ ಪಕ್ಷಗಳು ಮತ್ತು ಸಿಪಿಎಂ ಸೇರಿ 21 ಮುಖಂಡರೊಂದಿಗೆ ರಚಿಸಲಾಗಿರುವ ಮಹಾಘಟಬಂಧನ್ ಪ್ರಸ್ತುತ ಚುನಾವಣಯೆಲ್ಲಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲಲಿದೆ. ಆದರೆ ಪ್ರಧಾನಿ ಮೋದಿ ಅವರು ಸಮ್ಮಿಶ್ರ ಸರ್ಕಾರಗಳಿಂದ ಅಭಿವೃದ್ಧಿ ಸಾಧ್ಯವಿಲ್ಲ ಎನ್ನುತ್ತಿರುವುದು ಹಾಸ್ಯಾಸ್ಪದ ಎಂದು ಹೇಳಿದರು.







