ಗಲಭೆ, ಹತ್ಯೆ ಮೂಲಕ ಮೋದಿ ಅಧಿಕಾರಕ್ಕೆ: ಮಮತಾ ಬ್ಯಾನರ್ಜಿ
“ಪ್ರಧಾನಿಯ ಚಟುವಟಿಕೆ ನೋಡಿದ್ದರೆ ಹಿಟ್ಲರ್ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದ”

ರಾಯ್‌ಗಂಜ್, ಎ. 9: ಪ್ರಧಾನಿ ನರೇಂದ್ರ ಮೋದಿ ಅವರು ಹಿಂಸಾಚಾರ ಮತ್ತು ಗಲಭೆ ಮೂಲಕ ಅಧಿಕಾರಕ್ಕೆ ಏರಿದ್ದಾರೆ ಎಂದು ಪಶ್ಚಿಮಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಂಗಳವಾರ ಹೇಳಿದ್ದಾರೆ.
ಮೋದಿ ಅವರ ಚಟುವಟಿಕೆಗಳನ್ನು ಅಡಾಲ್ಪ್ ಹಿಟ್ಲರ್ ನೋಡಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದ ಎಂದು ಅವರು ನುಡಿದಿದ್ದಾರೆ.
ಇಲ್ಲಿ ರ್ಯಾಲಿ ಉದ್ದೇಶಿಸಿ ಮಾತನಾಡಿದ ಬ್ಯಾನರ್ಜಿ, ಬಿಜೆಪಿಗೆ ಬಲವಾದ ಪೈಪೋಟಿ ನೀಡುವಲ್ಲಿ ಕಾಂಗ್ರೆಸ್ ವಿಫಲವಾಗಿದೆ. ಇದು ಬಿಜೆಪಿ ಬೆಳೆಯಲು ಕಾರಣವಾಗಿದೆ ಎಂದರು.
ಮೋದಿ ಅವರು ಗಲಭೆ ಹಾಗೂ ಹತ್ಯೆ ನಡೆಸುವ ಮೂಲಕ ಅಧಿಕಾರ ಪಡೆದುಕೊಂಡಿದ್ದಾರೆ. ಅವರು ಫ್ಯಾಸಿಸ್ಟ್‌ನ ರಾಜ. ಅಡಾಲ್ಫ್ ಹಿಟ್ಲರ್ ಬದುಕಿದ್ದಿದ್ದರೆ, ಮೋದಿ ಅವರ ಚಟುವಟಿಕೆ ನೋಡಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದ ಎಂದು ಅವರು ಹೇಳಿದರು.
ಕಾಂಗ್ರೆಸ್‌ಗೆ ಸ್ವತಂತ್ರವಾಗಿ ಸರಕಾರ ರಚಿಸಲು ಸಾಧ್ಯವಾಗದು ಎಂದು ಪ್ರತಿಪಾದಿಸಿದ ಅವರು, ಕೇಂದ್ರದಲ್ಲಿ ಸರಕಾರ ರಚಿಸಲು ಬಯಸುವುದಾದರೆ, ರಾಹುಲ್ ಗಾಂಧಿ ನೇತೃತ್ವದ ಕಾಂಗ್ರೆಸ್ ಇತರ ಪಕ್ಷಗಳ ನೆರವು ಕೋರಬೇಕು ಎಂದರು.
ಪ್ರತಿ ರಾಜ್ಯದಲ್ಲಿ ಮೈತ್ರಿ ಮಾಡುವ ಮೂಲಕ ಮೋದಿ ಅವರನ್ನು ಅಧಿಕಾರದಿಂದ ಹೊರಗಿಡಬಹುದು. ಒಂದು ಬಾರಿ ಮೋದಿ ಅವರನ್ನು ಅಧಿಕಾರದಿಂದ ಹೊರ ಹಾಕಿದರೆ, ನಾವೆಲ್ಲರೂ ನೂತನ ಭಾರತ ನಿರ್ಮಾಣ ಮಾಡಲು ಕಾರ್ಯ ನಿರ್ವಹಿಸಬಹುದು ಎಂದು ಮಮತಾ ಬ್ಯಾನರ್ಜಿ ಹೇಳಿದರು.







