ಬಿಎಂಟಿಸಿ ಬಸ್ ಬೈಕ್‌ಗೆ ಢಿಕ್ಕಿ: ಟೆಕ್ಕಿ ಸಾವು

ಬೆಂಗಳೂರು, ಎ.9: ಬಿಎಂಟಿಸಿ ಬಸ್ ಢಿಕ್ಕಿ ಹೊಡೆದು ಬೈಕ್‌ನಲ್ಲಿ ಹೋಗುತ್ತಿದ್ದ ಸಾಫ್ಟ್‌ವೇರ್ ಇಂಜಿನಿಯರ್ ಒಬ್ಬರು ಮೃತಪಟ್ಟಿರುವ ದುರ್ಘಟನೆ ಇಂದಿರಾನಗರದ 100 ಅಡಿ ರಸ್ತೆಯಲ್ಲಿ ನಿನ್ನೆ ರಾತ್ರಿ ನಡೆದಿದೆ ಎನ್ನಲಾಗಿದೆ.
ಬನ್ನೇರುಘಟ್ಟದ ಗೊಟ್ಟಿಗೆರೆಯ ಸೀತನಾಥನ್ ಯಾನೆ ಚಿನ್ನು(35) ಮೃತಪಟ್ಟವರು ಎಂದು ತಿಳಿದುಬಂದಿದೆ.
ಬಾಗಮನೆ ಟೆಕ್ ಪಾರ್ಕ್‌ನಲ್ಲಿ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ತಮಿಳುನಾಡು ಮೂಲದ ಸೀತನಾಥನ್ ಅವರು ರಾತ್ರಿ 8:30ರ ವೇಳೆ ಕೆಲಸ ಮುಗಿಸಿಕೊಂಡು ಬೈಕ್‌ನಲ್ಲಿ ಮನೆಗೆ ಹೋಗುತ್ತಿದ್ದರು. ಮಾರ್ಗ ಮಧ್ಯೆ ಇಂದಿರಾನಗರ 100 ಅಡಿ ರಸ್ತೆಯ 9ನೇ ಮುಖ್ಯರಸ್ತೆಯಲ್ಲಿ ಬಿಎಂಟಿಸಿ ಬಸ್‌ನ ಎಡಗಡೆಯಿಂದ ಹೋಗುತ್ತಿದ್ದಾಗ ತಿರುವಿನಲ್ಲಿ ಬಂದ ಬೈಕ್ ಆಯತಪ್ಪಿ ಬಸ್‌ಗೆ ಢಿಕ್ಕಿ ಹೊಡೆದು ಚಕ್ರಕ್ಕೆ ಸಿಕ್ಕಿ ತಲೆಗೆ ಗಂಭೀರವಾಗಿ ಗಾಯವಾಗಿತ್ತು.
ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಿದರೂ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಬಿಎಂಟಿಸಿ ಬಸ್ ಚಾಲಕನನ್ನು ಬಂಧಿಸಿ, ಹಲಸೂರು ಸಂಚಾರ ಪೊಲೀಸರು ತನಿಖೆ ಕೈಗೊಂಡಿದ್ದಾರೆ.





