ನಾಳೆ ಬೆಂಗಳೂರು ಕರಗ ಉತ್ಸವಕ್ಕೆ ಚಾಲನೆ
ಬೆಂಗಳೂರು, ಎ.10: ಐತಿಹಾಸಿಕ ಬೆಂಗಳೂರು ಕರಗದ ಪೂರ್ವಭಾವಿ ಧಾರ್ಮಿಕ ಕಾರ್ಯಕ್ರಮಗಳಿಗೆ ಗುರುವಾರ (ಎ. 11) ಚಾಲನೆ ದೊರೆಯಲಿದ್ದು, 19ರ ಮಧ್ಯರಾತ್ರಿ ಕರಗ ಶಕ್ತ್ಯೋತ್ಸವ ನಡೆಯಲಿದೆ.
ಧರ್ಮರಾಯ ಸ್ವಾಮಿ ದೇವಸ್ಥಾನದಲ್ಲಿ ಈಗಾಗಲೇ ಸಂಭ್ರಮ ಕಳೆಗಟ್ಟಿದೆ. ತಿಂಗಳ ಹಿಂದೆಯಿಂದಲೇ ಕರಗಕ್ಕಾಗಿ ಸಿದ್ಧತಾ ಕಾರ್ಯಗಳನ್ನು ನಡೆಸಲಾಗುತ್ತಿದೆ. ಕರಗಧಾರಿ ಎನ್.ಮನು ಪೂಜಾವ್ರತ, ಜ್ಞಾನ, ಯೋಗ ಮುಂತಾದ ಸಾಧನೆಯಲ್ಲಿ ತೊಡಗಿಕೊಂಡಿದ್ದಾರೆ. ಕರಗ ಉತ್ಸವ ಎ.21ರವರೆಗೆ ನಡೆಯಲಿದ್ದು, ಅರ್ಚಕ ಮನು ಹೂವಿನ ಕರಗ ಹೊತ್ತು ಬೆಂಗಳೂರಿನ ಬೀದಿಗಳಲ್ಲಿ ಮೆರವಣಿಗೆ ನಡೆಸಲಿದ್ದಾರೆ.
ಕರಗ ಉತ್ಸವವು ತಿಗಳ(ವಹ್ನಿ ಕುಲ ಕ್ಷತ್ರಿಯ) ಸಮುದಾಯದ ಪಾರಂಪರಿಕ ಆಚರಣೆಯಾಗಿದೆ. ಸ್ವರ್ಗಾರೋಹಣ ಪರ್ವದಲ್ಲಿ ಹಿಮಾಲಯದಲ್ಲಿ ಕಾಣಿಸಿಕೊಂಡ ತಿಮಿರ ಎಂಬ ರಾಕ್ಷಸನ ಸಂಹಾರ ಮಾಡಿದ ದ್ರೌಪದಿ ವಿಶ್ವರೂಪ ತಳೆದು ಸ್ವರ್ಗಕ್ಕೆ ಹಿಂದಿರುಗುವ ಸಂದರ್ಭದಲ್ಲಿ ವೀರಕುಮಾರರಿಗೆ ಕೊಟ್ಟ ಮಾತಿನಂತೆ ಚೈತ್ರಮಾಸದಲ್ಲಿ ಧರೆಗಿಳಿದು ಬಂದಾಗ ಆಚರಿಸುವ ಸಂಪ್ರದಾಯವೇ ಈ ಕರಗ ಉತ್ಸವ ಎನ್ನುವುದು ಪೌರಾಣಿಕ ಮಾತುಗಳಾಗಿವೆ.





