ಭಾರತದ ವಿವಿಗಳಲ್ಲಿ ನಿಟ್ಟೆ ವಿವಿಗೆ 70ನೇ ರ್ಯಾಂಕ್
ಮಂಗಳೂರು, ಎ.10: ಭಾರತದ ಸಾಂಸ್ಥಿಕ ರ್ಯಾಂಕಿಂಗ್ ಚೌಕಟ್ಟು (ಎನ್‌ಐಆರ್‌ಎಫ್) ದೇಶದ 900ಕ್ಕೂ ಹೆಚ್ಚು ವಿಶ್ವವಿದ್ಯಾನಿಲಯಗಳ ಮೌಲ್ಯಮಾಪನ ಮಾಡಿ ರ್ಯಾಂಕಿಂಗ್ ನೀಡಿದ್ದು, ನಗರದ ನಿಟ್ಟೆ ವಿಶ್ವವಿದ್ಯಾನಿಲಯ 70ನೇ ರ್ಯಾಂಕ್ ಗಳಿಸಿದೆ.
ಭಾರತ ಸರ್ಕಾರದ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ 2019ರ ಏಪ್ರಿಲ್ 8ರಂದು ಈ ರ್ಯಾಂಕಿಂಗ್ ಬಿಡುಗಡೆ ಮಾಡಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ನಿಟ್ಟೆ ವಿವಿ ಏಳು ಸ್ಥಾನಗಳ ಏರಿಕೆ ಕಂಡಿದ್ದು, ಸತತ ಮೂರನೇ ವರ್ಷ ದೇಶದ ಅಗ್ರ 100 ವಿಶ್ವವಿದ್ಯಾನಿಲಯಗಳ ಪೈಕಿ ಸ್ಥಾನ ಗಳಿಸಿದೆ.
ಭಾರತ ಸರ್ಕಾರದ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ 2015ರಲ್ಲಿ ಭಾರತದ ಸಾಂಸ್ಥಿಕ ರ್ಯಾಂಕಿಂಗ್ ಚೌಕಟ್ಟು (ಎನ್‌ಐಆರ್‌ಎಫ್) ರಚಿಸಿದ್ದು, ಇದು ದೇಶದ ಉನ್ನತ ಶಿಕ್ಷಣ ಸಂಸ್ಥೆಗಳನ್ನು ವಸ್ತುನಿಷ್ಠ ಮಾನದಂಡದ ಆಧಾರದಲ್ಲಿ ಮೌಲ್ಯಮಾಪನ ಮಾಡಿ ರ್ಯಾಂಕಿಂಗ್ ನೀಡುತ್ತದೆ. ಈ ರ್ಯಾಂಕಿಂಗ್‌ಗೆ ಪ್ರಮುಖವಾಗಿ ಬೋಧನೆ- ಕಲಿಕೆ ಸಂಪನ್ಮೂಲಗಳು, ಸಂಶೋಧನಾ ಉತ್ಪಾದಕತೆ, ವಿದ್ಯಾರ್ಥಿ ಫಲಿತಾಂಶ, ವಿಸ್ತರಣೆ, ಎಲ್ಲರ ಪಾಲ್ಗೊಳ್ಳುವಿಕೆ ಮತ್ತು ಸಂಸ್ಥೆಯ ಬಗ್ಗೆ ಸಮೂಹಕ್ಕೆ ಇರುವ ಭಾವನೆಗಳನ್ನು ಪರಿಗಣಿಸುತ್ತದೆ. ಬೋಧನೆ- ಕಲಿಕೆ ಸಂಪನ್ಮೂಲ ಮಾನದಂಡದಲ್ಲಿ ನಿಟ್ಟೆ ವಿವಿ 25ನೇ ರ್ಯಾಂಕ್ ಪಡೆದಿದೆ. ವಿಸ್ತರಣೆ ಮತ್ತು ಎಲ್ಲರ ಪಾಲ್ಗೊಳ್ಳುವಿಕೆ ಮಾನದಂಡದಲ್ಲಿ ದೇಶದಲ್ಲೇ 15ನೇ ಸ್ಥಾನದಲ್ಲಿದೆ.
ನಿಟ್ಟೆ ವಿವಿಯ ಸಹ ಸಂಸ್ಥೆಗಳಲ್ಲೊಂದಾದ ನಿಟ್ಟೆ ಗುಲಾಬಿ ಶೆಟ್ಟಿ ಸ್ಮಾರಕ ಫಾರ್ಮಸ್ಯೂಟಿಕಲ್ ಸೈನ್ಸಸ್ ಸಂಸ್ಥೆ (ಎನ್‌ಜಿಎಂಐಪಿಎಸ್) ರ್ಯಾಂಕಿಂಗ್ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದ ದೇಶದ 301 ಫಾರ್ಮಸಿ ಸಂಸ್ಥೆಗಳ ಪೈಕಿ 33ನೇ ರ್ಯಾಂಕಿಂಗ್ ಪಡೆದಿದೆ. ಈ ಮೂಲಕ ಸತತ ಮೂರನೇ ವರ್ಷ ಎನ್‌ಜಿಎಂಐಪಿಎಸ್ ಅಗ್ರ 35 ಕಾಲೇಜುಗಳ ಪಟ್ಟಿಯಲ್ಲಿ ಸ್ಥಾನ ಉಳಿಸಿಕೊಂಡಿದೆ.
ಎನ್‌ಎಂಎಎಂ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ನಿಟ್ಟೆ (ಎನ್‌ಎಂಎಎಂಐಟಿ) ಎಂಜಿನಿಯರಿಂಗ್ ವಿಭಾಗದಲ್ಲಿ 128ನೇ ರ್ಯಾಂಕ್ ಪಡೆದಿದ್ದು, ಬೆಂಗಳೂರಿನ ಯಲಹಂಕದಲ್ಲಿರುವ ನಿಟ್ಟೆ ಮೀನಾಕ್ಷಿ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಎನ್‌ಐಆರ್‌ಎಫ್ ರ್ಯಾಂಕಿಂಗ್ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದ 969 ಸಂಸ್ಥೆಗಳ ಪೈಕಿ 142ನೇ ಸ್ಥಾನದಲ್ಲಿದೆ.







