ರಾಜಕೀಯದಿಂದ ದೂರ ಉಳಿದಿದ್ದೆನೆ: ನಟ ಶಿವರಾಜ್ ಕುಮಾರ್

ಶಿವಮೊಗ್ಗ,ಎ.10: ಚುನಾವಣಾ ಪ್ರಚಾರದ ಸಮಯದಲ್ಲಿ, ಸಿನಿಮಾ ನಟರು ಅತ್ಯಂತ ಎಚ್ಚರಿಕೆಯಿಂದ ಮಾತನಾಡಬೇಕು. ಯಾರ ಮನಸ್ಸಿಗೂ ನೋವಾಗದಂತೆ ಹೇಳಿಕೆ ನೀಡಬೇಕು. ಆದರೆ ವೈಯಕ್ತಿಕ ಹೇಳಿಕೆ ನೀಡುವುದು ಸಂಬಂಧಿಸಿದವರಿಗೆ ಬಿಟ್ಟ ವಿಚಾರವಾಗಿದೆ ಎಂದು ಚಿತ್ರನಟ ಶಿವರಾಜ್ ಕುಮಾರ್ ರವರು ಅಭಿಪ್ರಾಯಪಟ್ಟಿದ್ದಾರೆ.
ಬುಧವಾರ ಕಾರ್ಯನಿಮಿತ್ತ ಶಿವಮೊಗ್ಗ ನಗರಕ್ಕೆ ಆಗಮಿಸಿದ್ದ ಅವರು, ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದರು. ದಯಮಾಡಿ ಯಾರು ಯಾರ ಮೇಲೂ ಭಿನ್ನಾಭಿಪ್ರಾಯಕ್ಕೆ ಆಸ್ಪದವಾಗದಂತೆ ಮಾತನಾಡಿ. ನಾನು ಕೇವಲ ಸಲಹೆ ನೀಡುತ್ತಿದ್ದೆನೆ. ಇದನ್ನು ತೆಗೆದುಕೊಳ್ಳುವುದು, ಬಿಡುವುದು ಸಂಬಂಧಿಸಿದವರಿಗೆ ಬಿಟ್ಟಿದ್ದಾಗಿದೆ ಎಂದರು.
ನಾನು ರಾಜಕೀಯ ವಿಚಾರಗಳನ್ನು ಹೆಚ್ಚಾಗಿ ನೋಡುವುದಿಲ್ಲ, ಕೇಳುವುದಿಲ್ಲ. ಎಲ್ಲ ಪಕ್ಷಗಳಲ್ಲಿಯೂ ನನ್ನ ಸ್ನೇಹಿತರಿದ್ದಾರೆ. ಎಲ್ಲರಿಗೂ ಒಳ್ಳೆಯದಾಗಬೇಕು. ಇದರ ಬಗ್ಗೆ ಹೆಚ್ಚಿನ ಪ್ರತಿಕ್ರಿಯೆ ನೀಡಲಾರೆ ಎಂದರು.
ಈ ಮೊದಲೇ ತಿಳಿಸಿದಂತೆ, ನಾವು ಚುನಾವಣಾ ಪ್ರಚಾರ ಕಾರ್ಯದಿಂದ ದೂರ ಉಳಿದಿದ್ದೆನೆ. ಯಾರ ಪರವೂ ಪ್ರಚಾರ ನಡೆಸಲು ಹೋಗುವುದಿಲ್ಲ. ಮಧು ಬಂಗಾರಪ್ಪ ತಮ್ಮ ಭಾಮೈದ ಮಾತ್ರವಲ್ಲ, ಒಳ್ಳೆಯ ಸ್ನೇಹಿತ ಕೂಡ ಎಂದರು.
ನಾನು ಅಭಿನಯಿಸಿರುವ 'ಕವಚ' ಒಂದು ವಿಭಿನ್ನ ಚಿತ್ರವಾಗಿದೆ. ಕಣ್ಣಿಲ್ಲದವರು ಸಾಧನೆ ಮಾಡಬಲ್ಲರು. ಅವರಿಗೂ ಒಂದು ಚಿಂತನೆಯಿದೆ. ಅವರಿಗೆ ಬೇಕಾಗಿರುವುದು ಅನುಕಂಪವಲ್ಲ ಎಂಬ ಮಾತನ್ನು ಈ ಸಿನಿಮಾ ಸಮರ್ಥಿಸಲಿದೆ ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.







