ಹಿಂದುತ್ವದ ಮೂಲಕ ಮತದಾರರ ದಿಕ್ಕು ತಪ್ಪಿಸಲೆತ್ನಿಸುತ್ತಿರುವ ಬಿಜೆಪಿ: ಮಧು ಬಂಗಾರಪ್ಪ ವಾಗ್ದಾಳಿ

ಶಿವಮೊಗ್ಗ, ಏ. 10: ಕಳೆದ ಐದು ವರ್ಷಗಳ ಅವಧಿಯಲ್ಲಿ, ಕೇಂದ್ರ ಬಿಜೆಪಿ ಸರ್ಕಾರವು ಜನಸಾಮಾನ್ಯರ ಏಳಿಗೆಗೆ ಯಾವುದೇ ಕ್ರಮಕೈಗೊಳ್ಳಲಿಲ್ಲ. ದೇಶದ ಅಭಿವೃದ್ದಿಗೂ ಶ್ರಮಿಸಲಿಲ್ಲ. ಇದೀಗ ಹಿಂದುತ್ವದ ಹೆಸರೇಳಿಕೊಂಡು ಮತದಾರರ ದಿಕ್ಕುತಪ್ಪಿಸಲು ಹೊರಟಿದೆ ಎಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟದ ಅಭ್ಯರ್ಥಿ ಮಧು ಬಂಗಾರಪ್ಪ ವಾಗ್ದಾಳಿ ನಡೆಸಿದ್ದಾರೆ.
ಬುಧವಾರ ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು. ಕಳೆದ ಲೋಕಸಭೆ ಚುನಾವಣೆಯಲ್ಲಿ ಹುಸಿ ಭರವಸೆ, ಆಶ್ವಾಸನೆ ನೀಡಿ ನರೇಂದ್ರ ಮೋದಿ ಅಧಿಕಾರಕ್ಕೇರಿದರು. ಅಧಿಕಾರಕ್ಕೆ ಬಂದಾಗ ಯಾವೊಂದು ಕೆಲಸವೂ ನಡೆಸದೆ, ಬರೀ ಬಣ್ಣಬಣ್ಣದ ಮಾತುಗಳನ್ನಾಡುತ್ತಾ ಹಾಗೂ ವಿದೇಶ ಸುತ್ತುತ್ತಾ ಕಾಲಹರಣ ಮಾಡಿದರು. ಪ್ರಸ್ತುತ ಚುನಾವಣೆಯಲ್ಲಿ ಜನರ ಮುಂದೆ ಹೋಗಲು ಅವರಿಗೆ ಯಾವುದೇ ಅಭಿವೃದ್ದಿ ವಿಷಯವಿಲ್ಲವಾಗಿದೆ. ಈ ಕಾರಣದಿಂದ ರಾಮನ ಜಪ ಮಾಡಲಾರಂಭಿಸಿದ್ದಾರೆ. ಮತ್ತೆ ಹಿಂದುತ್ವದ ಹೆಸರೇಳಿಕೊಂಡು ಮತಯಾಚನೆ ನಡೆಸುತ್ತಿದ್ದಾರೆ. ಇದು ನಾಚಿಕೆಗೇಡಿನ ಸಂಗತಿಯಾಗಿದೆ ಎಂದು ಟೀಕಾಪ್ರಹಾರ ನಡೆಸಿದರು.
ಮೋದಿಯವರದು ಹುಸಿ ದೇಶಾಭಿಮಾನವಾಗಿದೆ. ಸೈನಿಕರನ್ನು ಮುಂದಿಟ್ಟುಕೊಂಡು, ಬಡವರ ಸಂಕಷ್ಟಗಳಿಗೆ ಸ್ಪಂದಿಸದೆ, ಆರ್ಥಿಕಾಭಿವೃದ್ದಿಯನ್ನು ದಿವಾಳಿ ಎಬ್ಬಿಸಿ, ಉದ್ಯೋಗ ಸೃಷ್ಟಿಸದೆ ವಿದ್ಯಾವಂತರಿಗೆ ಪಕೋಡ ಮಾರುವಂತೆ ಹೇಳುತ್ತಾರೆ. ಕೋಮುವಾದ ಪುಷ್ಠಿ ಕೊಡುವ ಬಿಜೆಪಿಯು ಈ ಬಾರಿ ಧೂಳೀಪಟವಾಗಲಿದೆ ಎಂದರು.
ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಕಳೆದ ಹಲವು ದಿನಗಳಿಂದ ನಾನು ಬಿರುಸಿನ ಪ್ರಚಾರ ಕಾರ್ಯ ನಡೆಸುತ್ತಿದ್ದೆನೆ. ಎಲ್ಲೆಡೆಯಲ್ಲಿಯೂ ಮೈತ್ರಿಕೂಟ ಪರವಾದ ಅಲೆ ಕಂಡುಬರುತ್ತಿದೆ. ಇದನ್ನು ಗಮನಿಸಿದರೆ ದೊಡ್ಡ ಮತಗಳ ಅಂತರದಲ್ಲಿ ಜಯ ಸಾಧಿಸುವ ವಿಶ್ವಾಸ ತಮ್ಮದಾಗಿದೆ ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದರು.
ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದ ನಾಯಕರು-ಕಾರ್ಯಕರ್ತರು ಯಾವ ಗೊಂದಲ-ಗಡಿಬಿಡಿಯಿಲ್ಲದೆ ಒಟ್ಟಾಗಿ ಪ್ರಚಾರ ನಡೆಸುತ್ತಿದ್ದಾರೆ. ಎರಡೂ ಪಕ್ಷದ ನಾಯಕರು ತಮ್ಮ ಮೇಲೆ ವಿಶ್ವಾಸವಿಟ್ಟು ಅಭ್ಯರ್ಥಿಯಾಗಿ ಕಣಕ್ಕಿಳಿಸಿದ್ದಾರೆ. ಈ ವಿಶ್ವಾಸವನ್ನು ಉಳಿಸಿಕೊಂಡು ಹೋಗುತ್ತೆನೆ ಎಂದು ತಿಳಿಸಿದರು.
ಪಕ್ಷದ ವರಿಷ್ಠ ಹೆಚ್.ಡಿ.ದೇವೇಗೌಡರದ್ದು ಕುಟುಂಬ ರಾಜಕಾರಣ ಎಂದು ಹೇಳುವ ಬಿಜೆಪಿಯವರಿಗೆ ಆ ಪಕ್ಷದ ನಾಯಕರ ಕುಟುಂಬ ರಾಜಕಾರಣ ಗೋಚರವಾಗುತ್ತಿಲ್ಲವೇ? ಬಿ.ಎಸ್.ಯಡಿಯೂರಪ್ಪರವರದ್ದು ಕುಟುಂಬ ರಾಜಕಾರಣವಲ್ಲವೇ? ಅವರು ಪುತ್ರರನ್ನು ಬಿಟ್ಟರೇ, ಬೇರೆ ಯಾರನ್ನೂ ಕೂಡ ರಾಜಕಾರಣದಲ್ಲಿ ಬೆಳೆಸಿಲ್ಲ. ಆದರೆ ತಮ್ಮ ತಂದೆ (ಎಸ್.ಬಂಗಾರಪ್ಪ) ಯವರು ಹಲವರನ್ನು ರಾಜಕಾರಣದಲ್ಲಿ ಬೆಳೆಸಿದರು ಎಂದರು.
ಗೀತಾ ಶಿವರಾಜ್ ಕುಮಾರ್ ರವರು ಮಾತನಾಡಿ, ಸಹೋದರ ಮಧು ಗೆಲುವು ಖಚಿತವಾಗಿದೆ. ತಾವು ಕೂಡ ಕ್ಷೇತ್ರದಲ್ಲಿ ಕಳೆದ ಹಲವು ದಿನಗಳಿಂದ ಚುನಾವಣಾ ಪ್ರಚಾರ ಕಾರ್ಯದಲ್ಲಿ ತಲ್ಲೀನವಾಗಿದ್ದು, ಎಲ್ಲೆಡೆ ಮಧು ಪರವಾಗಿ ಉತ್ತಮ ಅಭಿಪ್ರಾಯ ವ್ಯಕ್ತವಾಗುತ್ತಿದೆ ಎಂದು ಹೇಳಿದರು. ಗೋಷ್ಠಿಯಲ್ಲಿ ಮುಖಂಡರಾದ ಆರ್.ಎಂ.ಮಂಜುನಾಥಗೌಡ, ಮಂಜುನಾಥ್ ಸೇರಿದಂತೆ ಮೊದಲಾದವರಿದ್ದರು.







