ಪ್ರಧಾನಿ ಮೋದಿ ಸುಳ್ಳು ಹೇಳುವುದರಲ್ಲಿ ನಿಪುಣರು: ಬಿ.ಕೆ.ಹರಿಪ್ರಸಾದ್

ಬೆಂಗಳೂರು, ಎ.10: ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್ ಕುರಿತು ಸುಳ್ಳು ಮಾಹಿತಿಯನ್ನು ನೀಡುತ್ತಿದ್ದಾರೆ. ಜನತೆಗೆ ಬಿಜೆಪಿ ನಾಯಕರ ಸುಳ್ಳು ಭರವಸೆಗಳ ಕುರಿತು ಚೆನ್ನಾಗಿ ಅರಿವಿಗೆ ಬಂದಿದೆ. ಹೀಗಾಗಿ ಈ ಬಾರಿ ಬಿಜೆಪಿ ಅಭ್ಯರ್ಥಿಗಳಿಗೆ ಮತದಾರರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಬಿ.ಕೆ.ಹರಿಪ್ರಸಾದ್ ತಿಳಿಸಿದರು.
ಬುಧವಾರ ನಗರದ ಬೊಮ್ಮನಹಳ್ಳಿ ಹಾಗೂ ಪದ್ಮನಾಭನಗರ ವಿಧಾನಸಭಾಕ್ಷೇತ್ರದಲ್ಲಿ ಪ್ರಚಾರ ಕೈಗೊಂಡ ಅವರು, 65 ವರ್ಷಗಳ ಆಡಳಿತಾವಧಿಯಲ್ಲಿ ಕಾಂಗ್ರೆಸ್ ನೀಡಿದ ಕೊಡುಗೆಯಲ್ಲಿ ಶೇ.10 ರಷ್ಟನ್ನೂ ಮೋದಿ ಆಡಳಿತದಲ್ಲಿ ನೀಡಿಲ್ಲ. ಹೀಗಾಗಿ ಕಾಂಗ್ರೆಸ್ ಬಗ್ಗೆ ಮಾತನಾಡುವ ಯಾವುದೆ ನೈತಿಕತೆ ಇಲ್ಲವೆಂದು ತಿಳಿಸಿದರು.
ಕಾಂಗ್ರೆಸ್ ಬೆಂಗಳೂರು ಅಭಿವೃದ್ದಿಗೆ ಸಾಕಷ್ಟು ಕೊಡುಗೆ ನೀಡಿದೆ. ಬೆಂಗಳೂರು ಇಂದು ವಿಶ್ವದಲ್ಲಿ ತನ್ನದೇ ಆದ ವಿಶಿಷ್ಟ ಛಾಪನ್ನು ಹೊಂದಲು ಕಾರಣ ಕಾಂಗ್ರೆಸ್. ಅಲ್ಲದೆ, ನಿರುದ್ಯೋಗ ನಿವಾರಣೆ, ಬಡತನ ನಿವಾರಣೆ, ರೈತರ ಅಭಿವೃದ್ದಿಗೆ ಸಾಕಷ್ಟು ಯೋಜನೆಗಳನ್ನು ಕಾಂಗ್ರೆಸ್ ತಂದಿದೆ. ಆದರೆ, ಈ ಯಾವುದೇ ಕೊಡುಗೆಯನ್ನು ನೀಡದ ಮೋದಿ ಕೇವಲ ಧರ್ಮದ ಆಧಾರದ ಮೇಲೆ ಹಾಗೂ ಸೈನಿಕರನ್ನು ಮುಂದಿಟ್ಟುಕೊಂಡು ಮತಯಾಚಿಸುತ್ತಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಮಾಜಿ ಗೃಹಮಂತ್ರಿ ರಾಮಲಿಂಗಾ ರೆಡ್ಡಿ ಮಾತನಾಡಿ, ಅನುಭವ ಹಾಗೂ ರಾಷ್ಟ್ರ ರಾಜಕಾರಣದಲ್ಲಿ ಪ್ರಮುಖರಾಗಿರುವ ಹರಿಪ್ರಸಾದ್ ಅವರನ್ನು ಕಾಂಗ್ರೆಸ್ ಕಣಕ್ಕಿಳಿಸಿದೆ. ಈ ಅಭ್ಯರ್ಥಿ ಆಯ್ಕೆಯಾದಲ್ಲಿ ನಗರದ ಪ್ರಮುಖ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಲಿದ್ದಾರೆ ಎಂದರು.
ಮಾಜಿ ಶಾಸಕ ಎಂ. ಶ್ರೀನಿವಾಸ್ ಮಾತನಾಡಿ, ಬಿ.ಕೆ ಹರಿಪ್ರಸಾದ್ ಅವರಂತಹ ಮುತ್ಸದ್ದಿ ಕಣದಲ್ಲಿರುವುದರಿಂದ ನಾನು ಪ್ರಚಾರಕ್ಕೆ ಬಂದಿದ್ದೇನೆ. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಲ್ಲಿ ಇನ್ನೂ ಹೆಚ್ಚಿನ ಅಭಿವೃದ್ದಿ ನಡೆಯಲಿದೆ ಎಂದರು. ಸಂಜೆ ಪದ್ಮನಾಭ ನಗರದಲ್ಲಿ ನಡೆದ ಚುನಾವಣಾ ಪ್ರಚಾರದಲ್ಲಿ ಅಭ್ಯರ್ಥಿ ಬಿ.ಕೆ.ಹರಿಪ್ರಸಾದ್ ಪಾದಯಾತ್ರೆಯನ್ನು ಮಾಡಿದರು. ಈ ಸಂದರ್ಭದಲ್ಲಿ ಸಾವಿರಾರು ಕಾಯಕರ್ರ್ತರು ಅವರಿಗೆ ಸಾಥ್ ನೀಡಿದರು.







