ವಸತಿ ಸಚಿವ ಎಂಟಿಬಿ ನಾಗರಾಜ್ ನಾಗಿಣಿ ಡ್ಯಾನ್ಸ್ ವಿಡಿಯೋ ವೈರಲ್

ಬೆಂಗಳೂರು, ಎ. 10: ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ವೀರಪ್ಪ ಮೊಯ್ಲಿ ಪರ ಚುನಾವಣಾ ಪ್ರಚಾರದ ವೇಳೆ ವಸತಿ ಸಚಿವ ಎಂಟಿಬಿ ನಾಗರಾಜ್ ನಾಗಿಣಿ ಡ್ಯಾನ್ಸ್ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
‘ತನಗೆ ಸಚಿವ ಸ್ಥಾನ ಕೊಡದಿದ್ದರೆ ಗಂಟು-ಮೂಟೆ ಕಟ್ಟುಕೊಂಡು ಹೋಗಬೇಕಾಗುತ್ತದೆ’ ಎಂದು ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರ ಮತ್ತು ಕಾಂಗ್ರೆಸ್ ಹೈಕಮಾಂಡ್‌ಗೆ ನೇರಾನೇರ ಎಚ್ಚರಿಕೆ ನೀಡಿ ಸುದ್ದಿಯಾಗಿದ್ದ ಎಂಟಿಬಿ ನಾಗರಾಜ್, ಪ್ರಚಾರದ ವೇಳೆ ಖುಷಿಯಲ್ಲಿ ನಾಗಿಣಿ ನೃತ್ಯ ಮಾಡಿ ಸುದ್ದಿಯಾಗಿದ್ದಾರೆ.
ಹೊಸಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿ ವೀರಪ್ಪ ಮೊಯ್ಲಿ ಅವರ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದ ಎಂಟಿಬಿ ನಾಗರಾಜ್, ತಮ್ಮ ಪಕ್ಷದ ಕಾರ್ಯಕರ್ತರೊಂದಿಗೆ ಸೇರಿ ಹಿಂದಿಯ ನಾಗಿನ್ ಸಿನಿಮಾದ ಸಂಗೀತಕ್ಕೆ ಡ್ಯಾನ್ಸ್ ಮಾಡಿದ್ದಾರೆ.
ಅರವತ್ತೇಳು ವರ್ಷದ ಸಚಿವ ಎಂಟಿಬಿ ನಾಗರಾಜ್ ಅವರು ಎರಡೂ ಕೈಗಳನ್ನು ಮೇಲೆತ್ತಿ ಹಾವಿನ ಹೆಡೆಯಂತೆ ಆಡಿಸುತ್ತಾ ನೃತ್ಯ ಮಾಡಲು ಆರಂಭಿಸಿದ್ದನ್ನು ಕಂಡ ಕಾರ್ಯಕರ್ತರು ಶಿಳ್ಳೆ-ಕೇಕೆ ಹಾಕಿ ಪ್ರೋತ್ಸಾಹಿಸಿದರು. ಕೆಲ ಕಾರ್ಯಕರ್ತರು ಅವರೊಂದಿಗೆ ಸ್ಟೆಪ್ ಹಾಕಿದ ವಿಡಿಯೋ ವೈರಲ್ ಆಗಿದೆ.







