ಮೈಕ್ರೋ ವೀಕ್ಷಕರು ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸಿ: ಕೇಂದ್ರ ಚುನಾವಣಾ ವೀಕ್ಷಕ ಕೃಷ್ಣ ಕುನಾಲ್

ಉಡುಪಿ, ಎ.10: ಉಡುಪಿ ಚಿಕ್ಕಮಗಳೂರು ಲೋಕಸಭಾ ಚುನಾವಣೆ ಕರ್ತವ್ಯಕ್ಕೆ ನಿಯೋಜಿತರಾಗಿರುವ ಮೈಕ್ರೋವೀಕ್ಷಕರು ನೇರವಾಗಿ ಚುನಾವಣಾ ಆಯೋಗಕ್ಕೆ ವರದಿ ಮಾಡಬೇಕಾಗಿರುವುದರಿಂದ ತಮ್ಮ ಜವಾಬ್ದಾರಿಯನ್ನು ಅರಿತು ಕರ್ತವ್ಯ ನಿರ್ವಹಿಸುವಂತೆ ಉಡುಪಿ ಚಿಕ್ಕಮಗಳೂರು ಲೋಕಸಭಾ ಚುನಾವಣೆಯ ಸಾಮಾನ್ಯ ವೀಕ್ಷಕ ಕೃಷ್ಣ ಕುನಾಲ್ ತಿಳಿಸಿದ್ದಾರೆ.
ಬುಧವಾರ, ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದಲ್ಲಿರುವ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ಮೈಕ್ರೋ ವೀಕ್ಷಕರಿಗೆ ನಡೆದ ತರಬೇತಿ ಕಾರ್ಯಕ್ರವುದಲ್ಲಿ ಅವರು ಮಾತನಾಡುತಿದ್ದರು.
ಮೈಕ್ರೋ ವೀಕ್ಷಕರು ಚುನಾವಣೆಯ ಸಂಪೂರ್ಣ ಕಾರ್ಯ ವಿಧಾನವನ್ನು ಅರಿತುಕೊಳ್ಳಬೇಕು. ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸುವ ಎಲ್ಲಾ ಸಿಬ್ಬಂದಿ ಗಳ ಕಾರ್ಯ ವಿಧಾನ, ಎವಿಎಂ, ವಿವಿ ಪ್ಯಾಟ್ ಸೇರಿದಂತೆ ಎಲ್ಲಾ ವಿಷಯಗಳ ಸಂಪೂರ್ಣ ಮಾಹಿತಿ ಹೊಂದಿರಬೇಕೆಂದು ವೀಕ್ಷಕರು ಹೇಳಿದರು.
ಮತಗಟ್ಟೆಯ ಬಳಿ ಯಾವುದೇ ಅಹಿತಕರ ಘಟನೆಗಳು ನಡೆದರೆ, ಮತ ಯಂತ್ರದಲ್ಲಿ ದೋಷ ಕಂಡು ಬಂದಲ್ಲಿ ತಕ್ಷಣ ಕಾರ್ಯಪ್ರವೃತ್ತರಾಗಬೇಕು. ಚುನಾವಣಾ ಆಯೋಗ ರೂಪಿಸಿರುವ ನಿಯಮಗಳಿಗೆ ಅನುಗುಣವಾಗಿ ಚುನಾವಣೆ ನಡೆಯುತ್ತಿರುವ ಬಗ್ಗೆ ಪರಿಶೀಲನೆ ನಡೆಸಬೇಕು ಎಂದರು.
ಮತದಾನ ನಡೆಯುವ ಹಿಂದಿನ ದಿನವೇ ಇತರೆ ಸಿಬ್ಬಂದಿಗಳೊಂದಿಗೆ ಮತಗಟ್ಟೆಯಲ್ಲಿರಬೇಕು. ಮತದಾನದ ದಿನ ಬೆಳಗ್ಗೆ 6 ಗಂಟೆಗೆ ನಡೆಸುವ ಮಾಕ್ ಪೋಲ್ ಪರಿಶೀಲಿಸಿ, ನಂತರ ಅದನ್ನು ಖಚಿತಪಡಿಸಿಕೊಂಡು ಡಿಲೀಟ್ ಮಾಡಬೇಕು. ಮತಗಟ್ಟೆಯೊಳಗೆ ಅನಧಿಕೃತ ವ್ಯಕ್ತಿಗಳ ಪ್ರವೇಶಕ್ಕೆ ಅನುಮತಿ ನೀಡಬಾರದು. ನಿಗದಿತ ಸಂಖ್ಯೆಗಿಂತ ಹೆಚ್ಚಿನ ಸಂಖ್ಯೆಯ ಪೋಲಿಂಗ್ ಏಜೆಂಟರಿಗೆ ಅನುಮತಿ ನೀಡಬಾರದು ಎಂದು ಕೃಷ್ಣ ಕುನಾಲ್ ತಿಳಿಸಿದರು.
ಮತದಾನದ ದಿನದಂದು, ಮತದಾನ ನಡೆದ ಪ್ರಮಾಣ, ಮತಯಂತ್ರದಲ್ಲಿ ದೋಷ ಕಂಡುಬಂದ ಬಗ್ಗೆ, ಮತಗಟ್ಟೆಗೆ ಭೇಟಿ ನೀಡಿದ ಸೆಕ್ಟರ್ ಅಧಿಕಾರಿ ಮತ್ತು ಪೊಲೀಸ್ ಆಧಿಕಾರಿಗಳು ಬಗ್ಗೆ, ಅನಧಿಕೃತ ವ್ಯಕ್ತಿಗಳು ಮತಗಟ್ಟೆಗೆ ಪ್ರವೇಶಿಸಿದ ಬಗ್ಗೆ, ಮತದಾನಕ್ಕೆ ಯಾವುದೇ ಅಡಚಣೆ ಆಗಿರುವ ಕುರಿತಂತೆ ಅಪರಾಹ್ನ 12 ಕ್ಕೆ, 3 ಕ್ಕೆ ಮತ್ತು ಮತದಾನ ಮುಗಿದ ಬಳಿಕ ವ್ಯಾಟ್ಸಾಪ್ ನಲ್ಲಿ ತಮಗೆ ಮಾಹಿತಿ ನೀಡುವಂತೆ ಸೂಚಿಸಿದರು.
ಮತದಾನ ಸಂದರ್ಭದಲ್ಲಿ ಪೋಟೋ ವೋಟರ್ ಸ್ಲಿಪ್‌ನ್ನು ಮತದಾನಕ್ಕೆ ದಾಖಲೆಯನ್ನಾಗಿ ಪರಿಗಣಿಸಬೇಡಿ. ಚುನಾವಣಾ ಆಯೋಗ ನೀಡಿರುವ ಇತರೆ 11 ಗುರುತಿನ ದಾಖಲೆಗಳಲ್ಲಿ ಒಂದನ್ನು ಪರಿಗಣಿಸಿ ಎಂದ ವೀಕ್ಷಕರು, ಎ.18 ರಂದು ಮತದಾನ ಮುಕ್ತಾಯದ ಬಳಿಕ ಎ.19ರಂದು ಅನಿವಾರ್ಯತೆ ಇದ್ದಲ್ಲಿ ಮೈಕ್ರೋ ವೀಕ್ಷಕರು ಅಗತ್ಯವಿರುವುದರಿಂದ ಉಡುಪಿ ಬಿಟ್ಟು ಬೇರೆಡೆಗೆ ತೆರಳದಂತೆ ಸೂಚಿಸಿದರು.
ಅಪರ ಜಿಲ್ಲಾಧಿಕಾರಿ ವಿದ್ಯಾ ಕುಮಾರಿ, ಮೈಕ್ರೋ ವೀಕ್ಷಕರ ಕರ್ತವ್ಯ ಮತ್ತು ಜವಾಬ್ದಾರಿಗಳ ಕುರಿತು ಮಾಹಿತಿ ನೀಡಿದರು. ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಉಪಸ್ಥಿತರಿದ್ದರು.
ಮೈಕ್ರೋ ವೀಕ್ಷಕರಿಗೆ ಇವಿಎಂ ಮತ್ತು ವಿವಿ ಪ್ಯಾಟ್ ಕಾರ್ಯ ನಿರ್ವಹಣೆ ಕುರಿತಂತೆ ಪ್ರಾತ್ಯಕ್ಷಿಕೆ ನೀಡಲಾಯಿತು.








