‘ಮೋದಿ ಸರಕಾರ ಮತ್ತೆ ಅಧಿಕಾರಕ್ಕೇರದಂತೆ ತಡೆಯಲು ಪಣ’

ಮಂಗಳೂರು, ಎ.10: ಕಾರ್ಮಿಕ ವಿರೋಧಿ ಸರಕಾರವನ್ನು ಮತ್ತೆ ಅಧಿಕಾರಕ್ಕೇರದಂತೆ ತಡೆಯಲು ಇಡೀ ದೇಶದ ಕಾರ್ಮಿಕ ವರ್ಗ ಒಂದಾಗಬೇಕು ಎಂದು ಸಿಐಟಿಯು ರಾಜ್ಯ ಉಪಾಧ್ಯಕ್ಷ ವಸಂತ ಆಚಾರಿ ಕಾರ್ಮಿಕರಿಗೆ ಕರೆ ನೀಡಿದರು.
ನಗರದ ಬಂದರ್ ಪ್ರದೇಶದ ಮಹಿಳಾ ಹಮಾಲಿ ಕಾರ್ಮಿಕರ ಸಮಾವೇಶವನ್ನುದ್ದೇಶಿಸಿ ಬುಧವಾರ ಮಾತನಾಡಿದ ಅವರು, ಜೀವನಾವಶ್ಯಕ ವಸ್ತುಗಳ ಬೆಲೆಗಳು ದಿನದಿಂದ ದಿನಕ್ಕೆ ಏರುತ್ತಿದೆ. ಕಾರ್ಮಿಕರ ಪರವಾದ ಕಾನೂನುಗಳನ್ನು ಮಾಲಕರ ಪರವಾಗಿ ತಿದ್ದುಪಡಿ ಮಾಡುವ ಮೂಲಕ ಕನಿಷ್ಠ ಕೂಲಿ, ಸಾಮಾಜಿಕ ಭದ್ರತೆ, ಪಿಂಚಣಿ ಮುಂತಾದ ಸವಲತ್ತುಗಳನ್ನು ಇನ್ನಿಲ್ಲವಾಗಿಸಲು ಪ್ರಯತ್ನಿಸುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಕಳೆದ 5 ವರ್ಷಗಳ ಹಿಂದೆ ಅಧಿಕಾರಕ್ಕೇರಿದ ನರೇಂದ್ರ ಮೋದಿ ಸರಕಾರವು ಜನತೆಗೆ ನೀಡಿದಂತಹ ‘ಅಚ್ಚೇದಿನ್’, ‘ಸಬ್ಕಾ ಸಾಥ್ ಸಬ್ಕಾ ವಿಕಾಸ್’, ‘ಕಪ್ಪುಹಣ-ಪ್ರತಿಯೊಬ್ಬರ ಖಾತೆಗೆ 15ಲಕ್ಷ ಹಣ’, ‘ಬೆಲೆಯೇರಿಕೆ ನಿಯಂತ್ರಣ’ ಮುಂತಾದ ಬಣ್ಣಬಣ್ಣದ ಘೋಷಣೆಗಳೆಲ್ಲ ಹಸಿಹಸಿ ಸುಳ್ಳುಗಳೆಂದು ಸಾಬೀತಾಗಿದೆ ಎಂದರು.
ಮುಖ್ಯಅತಿಥಿಗಳಾಗಿ ಭಾಗವಹಿಸಿದ್ದ ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ಮಾತನಾಡಿ, ಕಳೆದ 25 ವರ್ಷಗಳಿಂದ ಜಿಲ್ಲೆಯಲ್ಲಿ ಗೆದ್ದು ಬಂದಂತಹ ಬಿಜೆಪಿ ಸಂಸದರು, ಅದರಲ್ಲೂ ಕಳೆದ 10 ವರ್ಷಗಳಿಂದ ಇರುವ ನಳಿನ್‌ಕುಮಾರ್ ಕಟೀಲ್ ಜಿಲ್ಲೆಯ ಅಭಿವೃದ್ಧಿಗೆ ಕಿಂಚಿತ್ತೂ ಗಮನ ನೀಡಲಿಲ್ಲ. ಬದಲಾಗಿ ಜಿಲ್ಲೆಯ ಶಾಂತಿ ನೆಮ್ಮದಿಗೆ ಭಂಗ ಮಾಡುತ್ತಾ ಜಿಲ್ಲೆಗೆ ಬೆಂಕಿ ಕೊಡುವುದಾಗಿ ಬಹಿರಂಗ ಹೇಳಿಕೆ ನೀಡುವ ಮೂಲಕ ಜಿಲ್ಲೆಯ ಜನತೆಯನ್ನು ತಲೆ ತಗ್ಗಿಸುವಂತೆ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜಿಲ್ಲೆಯ ಯುವಜನರಿಗೆ ಉದ್ಯೋಗ ಸೃಷ್ಟಿಸುವಂತಹ ಒಂದೇ ಒಂದು ಯೋಜನೆಯನ್ನು ತರಲು ಅಸಾಧ್ಯವಾದ ಸಂಸದರನ್ನು ಈ ಬಾರಿ ಮನೆಗೆ ಕಳುಹಿಸಲು ಕಾರ್ಮಿಕ ವರ್ಗ ಚಿಂತಿಸಬೇಕಾಗಿದೆ.ಜಾತ್ಯತೀತ ಶಕ್ತಿಗಳ ಗೆಲುವಿಗೆ ಶ್ರಮಿಸಬೇಕಾಗಿದೆ ಎಂದು ಹೇಳಿದರು.
ಸಭೆಯ ಅಧ್ಯಕ್ಷತೆಯನ್ನು ಬಂದರ್ ಹಮಾಲಿ ಕಾರ್ಮಿಕರ ಸಂಘದ ಅಧ್ಯಕ್ಷ ಅಹ್ಮದ್ ಬಾವ ವಹಿಸಿದ್ದರು. ವೇದಿಕೆಯಲ್ಲಿ ಸಂಘದ ಮುಖಂಡರಾದ ಸುಲೋಚನಾ, ಕುಶಾಲಾಕ್ಷಿ, ಮುಕ್ತಾ, ಸುಶೀಲಾ, ಗಿರಿಜಾ ಮುಂತಾದವರು ಉಪಸ್ಥಿತರಿದ್ದರು.








