ಮತಯಾಚನೆಗೆ ಉಗ್ರರ ಸಂಘಟನೆಯ ಹೆಸರು ಬಳಸಿದ ಆರೋಪ: ಬಿಜೆಪಿ ಅಭ್ಯರ್ಥಿಯ ಅನರ್ಹತೆಗೆ ಆಗ್ರಹ

ಹೊಸದಿಲ್ಲಿ, ಎ.10: ಬಿಜೆಪಿ ಅಭ್ಯರ್ಥಿ ಬೆಂಜಮಿನ್ ಮೇಟ್ ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸಿರುವ ಹಿನ್ನೆಲೆಯಲ್ಲಿ ಅವರನ್ನು ಅನರ್ಹಗೊಳಿಸಬೇಕು ಎಂಬ ಅರ್ಜಿಯ ಬಗ್ಗೆ ವಿಚಾರಣೆ ನಡೆಸುವಂತೆ ಮಣಿಪುರದ ಮುಖ್ಯ ಚುನಾವಣಾಧಿಕಾರಿ ಔಟರ್ ಮಣಿಪುರ ಸಂಸದೀಯ ಕ್ಷೇತ್ರದ ಚುನಾವಣಾಧಿಕಾರಿಗೆ ಪತ್ರ ಬರೆದಿದ್ದಾರೆ.
ಬಿಜೆಪಿ ಅಭ್ಯರ್ಥಿ ಬೆಂಜಮಿನ್ ಚುನಾವಣಾ ಪ್ರಚಾರದ ಸಂದರ್ಭ ನಿಷೇಧಿತ ಉಗ್ರಗಾಮಿ ಸಂಘಟನೆ ಕುಕಿ ನ್ಯಾಷನಲ್ ಆರ್ಗನೈಸೇಷನ್(ಕೆಎನ್‌ಒ) ಹಾಗೂ ಇತರ ಸಶಸ್ತ್ರ ಉಗ್ರ ಸಂಘಟನೆಗಳ ಹೆಸರನ್ನು ಬಳಸಿ ಮತದಾರರ ಮೇಲೆ ಒತ್ತಡ ಹೇರಲು ಪ್ರಯತ್ನಿಸಿದ್ದಾರೆ ಎಂಬ ದೂರಿನ ಹಿನ್ನೆಲೆಯಲ್ಲಿ ಆಯೋಗ ಈ ಸೂಚನೆ ನೀಡಿದೆ.
ನ್ಯಾಷನಲ್ ಪೀಪಲ್ಸ್ ಪಾರ್ಟಿಯ ಅಭ್ಯರ್ಥಿ ಥಂಗ್‌ಮಿನೇನ್ ಕಿಗೆನ್ ನೀಡಿದ ದೂರಿನ ಹಿನ್ನೆಲೆಯಲ್ಲಿ ಮುಖ್ಯ ಚುನಾವಣಾಧಿಕಾರಿ ಎಪ್ರಿಲ್ 9ರಂದು ಸೂಚನೆ ನೀಡಿದ್ದು, ಶೀಘ್ರದಲ್ಲಿ ಈ ಬಗ್ಗೆ ಪ್ರತಿಕ್ರಿಯಿಸುವಂತೆ ತಿಳಿಸಿದ್ದಾರೆ.
ಔಟರ್ ಮಣಿಪುರ ಸಂಸದೀಯ ಕ್ಷೇತ್ರದಲ್ಲಿ ಚಲಾವಣೆಯಾಗುವ ಮತಗಳಲ್ಲಿ ಶೇ. 90ರಷ್ಟು ಬಿಜೆಪಿ ಅಭ್ಯರ್ಥಿಗೆ ಬೀಳಬೇಕು. ಇಲ್ಲದಿದ್ದರೆ ತಕ್ಕ ಶಿಕ್ಷೆ ವಿಧಿಸಲಾಗುತ್ತದೆ ಎಂದು ಕ್ಷೇತ್ರದ ವ್ಯಾಪ್ತಿಯಲ್ಲಿರುವ ಗ್ರಾಮಗಳ ಮುಖಂಡರಿಗೆ ಕೆಎನ್‌ಎ ಎಚ್ಚರಿಕೆ ನೀಡಿರುವುದಾಗಿ ಮಾಧ್ಯಮಗಳಲ್ಲಿ ವರದಿಯಾಗಿದೆ. ಈ ಕ್ಷೇತ್ರದಲ್ಲಿ ಎಪ್ರಿಲ್ 11ರಂದು ಮತದಾನ ನಡೆಯಲಿದೆ.







