ಗುಜ್ಜರ್ ಮೀಸಲಾತಿ ನಾಯಕ ಕಿರೋರಿ ಸಿಂಗ್ ಬೈನ್ಸ್‌ಲಾ ಬಿಜೆಪಿಗೆ

ಹೊಸದಿಲ್ಲಿ, ಎ. 10: ಗುಜ್ಜರ್ ಮೀಸಲಾತಿ ಚಳವಳಿ ನಾಯಕ ಕಿರೋರಿ ಸಿಂಗ್ ಬೈನ್‌ಸ್ಲಾ ಬುಧವಾರ ಬಿಜೆಪಿಗೆ ಸೇರ್ಪಡೆಯಾದರು. ಇಲ್ಲಿನ ಬಿಜೆಪಿಯ ಕೇಂದ್ರ ಕಚೇರಿಯಲ್ಲಿ ಕಿರೋರಿ ಸಿಂಗ್ ಬೈನ್‌ಸ್ಲಾ ಹಾಗೂ ಅವರ ಪುತ್ರ ವಿಜಯ್ ಬೈನ್‌ಸ್ಲಾ ಪಕ್ಷಕ್ಕೆ ಸೇರ್ಪಡೆಯಾದರು.
ಈ ಸಂದರ್ಭ ಬಿಜೆಪಿಯ ರಾಜಸ್ಥಾನದ ಉಸ್ತುವಾರಿ ಪ್ರಕಾಶ್ ಜಾವ್ಡೇಕರ್ ಉಪಸ್ಥಿತರಿದ್ದರು. ‘‘ನಾನು ಪ್ರಧಾನಿ ನರೇಂದ್ರ ಮೋದಿ ಅವರಲ್ಲಿ ಅಪರೂಪದ ವ್ಯಕ್ತಿತ್ವವನ್ನು ನೋಡಿದ್ದೇನೆ. ಅದಕ್ಕಾಗಿ ನಾನು ಬಿಜೆಪಿ ಸೇರಿದೆ. ಪ್ರಧಾನಿ ಅವರು ಸಾಮಾನ್ಯ ಜನರೊಂದಿಗೆ ಸಂವಹನ ನಡೆಸುವುದು ಹಾಗೂ ಅವರ ಕಾರ್ಯಾಚರಣೆ ರೀತಿಯಿಂದ ನಾನು ಪ್ರೇರಿತನಾದೆ’’ ಎಂದು ಕಿರೋರಿ ಸಿಂಗ್ ಬೆನ್ಸ್‌ಲಾ ಹೇಳಿದ್ದಾರೆ.
ನಾನು ಎರಡೂ ಪಕ್ಷಗಳ, ಅಂದರೆ ಬಿಜೆಪಿ ಹಾಗೂ ಕಾಂಗ್ರೆಸ್‌ನ ಮುಖ್ಯಮಂತ್ರಿಗಳ ನಿಕಟವರ್ತಿ. ಅಲ್ಲದೆ ಎರಡೂ ಪಕ್ಷಗಳ ಸಿದ್ಧಾಂತ ಗಮನಿಸಿದ್ದೇನೆ. ಎರಡೂ ಪಕ್ಷಗಳನ್ನು ಹತ್ತಿರದಿಂದ ಗಮನಿಸಿದ ಬಳಿಕ ಬಿಜೆಪಿಗೆ ಸೇರಿದೆ ಎಂದು ಅವರು ಹೇಳಿದ್ದಾರೆ. ಬೈನ್ಸ್‌ಲಾ ಅವರು ಇಂದು ಬೆಳಗ್ಗೆ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರನ್ನು ಭೇಟಿಯಾಗಿದ್ದಾರೆ. ದಿನ ಕಳೆದಂತೆ ರಾಜಸ್ಥಾನದಲ್ಲಿ ಬಿಜೆಪಿ ಬಲಿಷ್ಠವಾಗುತ್ತಿದೆ. ರಾಜಸ್ಥಾನದಲ್ಲಿ ಬಿಜೆಪಿ 25 ಲೋಕಸಭಾ ಕ್ಷೇತ್ರಗಳಲ್ಲಿ ಜಯ ಗಳಿಸಲಿದೆ ಎಂದು ಜಾವ್ಡೇಕರ್ ಹೇಳಿದ್ದಾರೆ.







