ಎಂ.ಜೆ. ಅಕ್ಬರ್ ಮಾನನಷ್ಟ ಮೊಕದ್ದಮೆ ಪ್ರಕರಣ: ತಪ್ಪೆಸಗಿಲ್ಲ ಎಂದು ನ್ಯಾಯಾಲಯದಲ್ಲಿ ಹೇಳಿದ ಪ್ರಿಯಾ ರಮಣಿ

ಹೊಸದಿಲ್ಲಿ, ಎ. 10: ಕೇಂದ್ರದ ಮಾಜಿ ಸಚಿವ ಎಂ.ಜೆ. ಅಕ್ಬರ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದ ಪತ್ರಕರ್ತೆ ಪ್ರಿಯಾ ರಮಣಿ ವಿರುದ್ಧ ದಿಲ್ಲಿ ನ್ಯಾಯಾಲಯ ಬುಧವಾರ ಆರೋಪ ಪಟ್ಟಿ ರೂಪಿಸಿದೆ. ಈ ಹಿನ್ನೆಲೆಯಲ್ಲಿ ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟಿನ್ ದಂಡಾಧಿಕಾರಿ ಸಮರ್ ವಿಶಾಲ್ ಮುಂದೆ ಹಾಜರಾದ ಪ್ರಿಯಾ ರಮಣಿ, ತಾನು ತಪ್ಪೆಸಗಿಲ್ಲ ಎಂದಿದ್ದಾರೆ ಹಾಗೂ ವಿಚಾರಣೆ ನಡೆಸುವಂತೆ ಮನವಿ ಮಾಡಿದ್ದಾರೆ.
ಫೆಬ್ರವರಿ 25ರಂದು ಪಟಿಯಾಲ ಹೌಸ್ ನ್ಯಾಯಾಲಯ 10 ಸಾವಿರ ರೂ. ಶ್ಯೂರಿಟಿಯಲ್ಲಿ ಪ್ರಿಯಾ ರಮಣಿ ಅವರಿಗೆ ಜಾಮೀನು ಮಂಜೂರು ಮಾಡಿತ್ತು. ತಮ್ಮ ವಿರುದ್ಧ ಕೇಳಿ ಬಂದ ಲೈಂಗಿಕ ಕಿರುಕುಳದ ಆರೋಪದ ಹಿನ್ನೆಲೆಯಲ್ಲಿ ಕಳೆದ ವರ್ಷ ಅಕ್ಟೋಬರ್ 17ರಂದು ಎಂ.ಜೆ. ಅಕ್ಬರ್ ಕೇಂದ್ರದ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಅನಂತರ ಅವರು ಪ್ರಿಯಾ ರಮಣಿ ವಿರುದ್ಧ ಮಾನನಷ್ಟ ಮೊಕದ್ದಮೆ ಪ್ರಕರಣ ದಾಖಲಿಸಿದ್ದರು. ಕಳೆದ ವರ್ಷ ಸಾಮಾಜಿಕ ಜಾಲ ತಾಣದಲ್ಲಿ ‘ಮೀ ಟೂ’ ಅಭಿಯಾನದಡಿ ಪತ್ರಕರ್ತೆ ಪ್ರಿಯಾ ರಮಣಿ ಅವರು ಎಂ.ಜೆ. ಅಕ್ಬರ್ ಪತ್ರಕರ್ತರಾಗಿದ್ದಾಗ ತನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದ್ದರು.
ಇವರಲ್ಲದೆ, ಇತರ 20 ಮಹಿಳೆಯರು ಅಕ್ಬರ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದರು. ಈ ಎಲ್ಲ ಆರೋಪಗಳನ್ನು ಎಂ.ಜೆ. ಅಕ್ಬರ್ ನಿರಾಕರಿಸಿದ್ದರು. ಅಲ್ಲದೆ ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ನ್ಯಾಯಾಲಯ ವಿಚಾರಣೆಯನ್ನು ಮೇ 4ಕ್ಕೆ ನಿಗದಿಪಡಿಸಿದೆ ಹಾಗೂ ಪ್ರಿಯಾ ರಮಣಿ ಅವರು ನ್ಯಾಯಾಲಯಕ್ಕೆ ವೈಯಕ್ತಿಕವಾಗಿ ಹಾಜರಾಗುವುದಕ್ಕೆ ವಿನಾಯಿತಿ ನೀಡಿದೆ.





