ಸಣ್ಣ ಕೈಗಾರಿಕೆಗಳಿಗೆ ಮೂಲ ಸೌಲಭ್ಯ ಕಲ್ಪಿಸಲು ಆದ್ಯತೆ: ಕೈಗಾರಿಕಾ ಇಲಾಖೆ ಕಾರ್ಯದರ್ಶಿ ಮಹೇಶ್ವರ್ ರಾವ್

ಬೆಂಗಳೂರು, ಎ. 10: ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ(ಎಂಎಸ್‌ಎಂಇ) ವಿದ್ಯುತ್, ರಸ್ತೆ, ನೀರು, ಒಳಚರಂಡಿ ಸಂಪರ್ಕ ಸೇರಿದಂತೆ ಅಗತ್ಯ ಮೂಲಭೂತ ಸೌಲಭ್ಯ ಕಲ್ಪಿಸಲು ರಾಜ್ಯ ಸರಕಾರ ಅಗತ್ಯ ಕ್ರಮ ಕೈಗೊಳ್ಳಲಿದೆ ಎಂದು ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಕಾರ್ಯದರ್ಶಿ ಮಹೇಶ್ವರ್ ರಾವ್ ಭರವಸೆ ನೀಡಿದ್ದಾರೆ.
ಬುಧವಾರ ಕಾಶಿಯಾ ಏರ್ಪಡಿಸಿದ್ದ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಕೈಗಾರಿಕಾ ಪ್ರದೇಶಗಳಲ್ಲಿ ಸಮರ್ಪಕ ಮೂಲಸೌಕರ್ಯಾಭಿವೃದ್ದಿ ಕೊರತೆಗಳಿವೆ. ಇದರಿಂದ ಕೈಗಾರಿಕೆಗಳಿಗೆ ಸಮರ್ಪಕ ಉತ್ತೇಜನ ದೊರೆಯುತ್ತಿಲ್ಲ ಎಂದು ಹೇಳಿದರು.
ಎಂಎಸ್‌ಎಂಇಗಳು ಕ್ಷಿಪ್ರವಾಗಿ ಮತ್ತು ವೇಗವಾಗಿ ಅಭಿವೃದ್ದಿಯಾಗುವುದರಿಂದ ಇಂತಹ ಕ್ಲಸ್ಟರ್‌ಗಳಲ್ಲಿ ಸಂಪೂರ್ಣ ಮೂಲಸೌಕರ್ಯಾಭಿವೃದ್ದಿ ಸೌಲಭ್ಯಗಳೊಂದಿಗೆ ಸಮೂಹ ರಚನೆಗೆ ಬೆಂಬಲ ಮತ್ತು ಪ್ರೋತ್ಸಾಹ ನೀಡಲು ಆದ್ಯತೆ ನೀಡಲಾಗುವುದು ಎಂದು ಅವರು ಹೇಳಿದರು.
ಕಾಶಿಯಾ ಅಧ್ಯಕ್ಷ ಬಸವರಾಜ್ ಎಸ್.ಜವಳಿ ಮಾತನಾಡಿ, ಪ್ರಸ್ತುತ ಕೆಎಸ್‌ಎಫ್‌ಸಿ ಮೂಲಕ ಶೇ.4ರ ಬಡ್ಡಿ ದರದ ಸಹಾಯಧನ ಯೋಜನೆ, ಎಸ್‌ಐಡಿಬಿಐ ಮತ್ತು ಷೆಡ್ಯೂಲ್ ಬ್ಯಾಂಕುಗಳಿಗೂ ಬಡ್ಡಿ ಸಹಾಯಧನ ವಿಸ್ತರಣೆ ಕುರಿತು, ಮಹಿಳಾ ಉದ್ಯಮಿಗಳಿಗೆ ವಿಶೇಷ ಆದ್ಯತೆ ಅಗತ್ಯ ನೀಡಬೇಕು ಎಂದರು.
ಇಂಧನ ಸುಂಕ, ವಿದ್ಯುತ್ ಶುಲ್ಕ, ಉದ್ಯಮಿಗಳಿಗೆ ವಿಮಾ ಸೌಲಭ್ಯ ಕುರಿತು, ಖಾಸಗಿ ಕೈಗಾರಿಕಾ ಪ್ರದೇಶಗಳಲ್ಲಿ ಎಂಎಸ್‌ಎಂಇ ಅಭಿವೃದ್ದಿಗಾಗಿ ಮೂಲಸೌಕರ್ಯ ಅಭಿವೃದ್ದಿಗೆ ಹಣಕಾಸು ನಿಧಿ ನೀಡಿಕೆ ಬಗ್ಗೆ ಸರಕಾರ ಆಲೋಚಿಸಬೇಕು ಎಂದು ಆಗ್ರಹಿಸಿದರು.







