ಅಪಾರ್ಟ್ಮೆಂಟ್ ಮೇಲಿಂದ ಬಿದ್ದು, ಯುವಕ ಮೃತ್ಯು
ಬೆಂಗಳೂರು, ಎ.10: ಮದ್ಯದ ಅಮಲಿನಲ್ಲಿ ಯುವಕನೋರ್ವ ಅಪಾರ್ಟ್ಮೆಂಟ್ ಮೇಲಿಂದ ಬಿದ್ದು, ಮೃತಪಟ್ಟಿರುವ ದುರ್ಘಟನೆ ಇಲ್ಲಿನ ಗಾಯಿತ್ರಿ ನಗರದಲ್ಲಿ ನಡೆದಿದೆ. ಶ್ರೀರಾಮಪುರದ ನಾಗಪ್ಪಬ್ಲಾಕ್ ನಿವಾಸಿ ವಿಜಯ್(24) ಮೃತಪಟ್ಟ ಯುವಕ ಎಂದು ತಿಳಿದುಬಂದಿದೆ.
ಮೆಡಿಕಲ್ ಸ್ಟೋರ್ನಲ್ಲಿ ಕೆಲಸ ಮಾಡುತ್ತಿದ್ದ ವಿಜಯ್, ಮಂಗಳವಾರ ರಾತ್ರಿ 11ರ ವೇಳೆ ಮದ್ಯಪಾನ ಮಾಡಿ ಗಾಯಿತ್ರಿ ನಗರಕ್ಕೆ ಬಂದಿದ್ದಾನೆ. ಅಲ್ಲಿನ ಮದ್ಯದಂಗಡಿಯೊಂದರಲ್ಲಿ ಮದ್ಯ ಸೇವಿಸಿ ಸಮೀಪದ ಜಿಎನ್ಆರ್ ಎನ್ಕ್ಲೇವ್ ಅಪಾರ್ಟ್ಮೆಂಟ್ ಬಳಿ 11:55ರ ವೇಳೆ ಅಪಾರ್ಟ್ಮೆಂಟ್ ಮೇಲೆ ಹೋಗಿ ಆಯತಪ್ಪಿ ಕೆಳಗೆ ಬಿದ್ದಿದ್ದಾನೆ.
ತಲೆ, ಎದೆಭಾಗಕ್ಕೆ ಗಾಯಗೊಂಡಿದ್ದ ವಿಜಯ್ ಸ್ಥಳದಲ್ಲೇ ಮೃತಪಟ್ಟಿದ್ದು, ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ ಸುಬ್ರಮಣ್ಯ ನಗರ ಪೊಲೀಸರು ಪ್ರಕರಣ ದಾಖಲಿಸಿ, ಮುಂದಿನ ತನಿಖೆ ಕೈಗೊಂಡಿದ್ದಾರೆ ಎಂದು ಡಿಸಿಪಿ ಶಶಿಕುಮಾರ್ ತಿಳಿಸಿದ್ದಾರೆ.
Next Story