ಭಾರತ ತಂಡಕ್ಕೆ ಕ್ರೀಡಾ ಸಚಿವಾಲಯದಿಂದ ಹಸಿರು ನಿಶಾನೆ
ಬುಡಾಪೆಸ್ಟ್ ನಲ್ಲಿ ಎ.21ರಿಂದ ವಿಶ್ವ ಟಿಟಿ ಚಾಂಪಿಯನ್ ಶಿಪ್

ಹೊಸದಿಲ್ಲಿ, ಎ.10: ಬುಡಾಪೆಸ್ಟ್‌ನಲ್ಲಿ ಮುಂಬರುವ ಟೇಬಲ್ ಟೆನಿಸ್ ವಿಶ್ವಚಾಂಪಿಯನ್‌ಶಿಪ್‌ಗೆ ಭಾರತ ತಂಡ ಭಾಗವಹಿಸುವ ಕುರಿತು ಇದ್ದ ಅನಿಶ್ಚಿತತೆಗೆ ಕೊನೆಗೂ ತೆರೆ ಬಿದ್ದಿದೆ. ಎ.21-28ರವರೆಗೆ ನಡೆಯಲಿರುವ ಈ ಟೂರ್ನಿಗೆ ಭಾಗವಹಿಸುವ ಭಾರತದ 8 ಸಂಭವನೀಯ ಆಟಗಾರರ ಪ್ರವಾಸಕ್ಕೆ ಮಂಗಳವಾರ ಕ್ರೀಡಾ ಸಚಿವಾಲಯ ಅನುಮತಿ ನೀಡಿದೆ.
2020 ಟೋಕಿಯೊ ಒಲಿಂಪಿಕ್ ಕ್ವಾಲಿಫೈಯರ್ ಟೂರ್ನಿಗಳಿಗೆ ಪ್ರಮುಖ ರ್ಯಾಂಕಿಂಗ್ ಪಾಯಿಂಟ್‌ಗಳನ್ನು ಒದಗಿಸುವ ಟೂರ್ನಿಗೆ ಸಚಿವಾಲಯ ಅನುದಾನ ಬಿಡುಗಡೆ ಮಾಡಿದೆ. ಇದರ ಜೊತೆಗೆ ಡೆನ್ಮಾರ್ಕ್‌ನಲ್ಲಿ ಎ.9-19ರವರೆಗೆ ನಡೆಯಬೇಕಿದ್ದ ತಂಡದ ರಾಷ್ಟ್ರೀಯ ಶಿಬಿರಕ್ಕೂ ಹಸಿರು ನಿಶಾನೆ ತೋರಿದೆ. ಈ ಮೊದಲು ಶಿಬಿರವು ಸಚಿವಾಲಯದ ಸಂವಹನದ ಕೊರತೆಯ ಕಾರಣ ಭಾರತ ಟೇಬಲ್ ಟೆನಿಸ್ ಒಕ್ಕೂಟದಿಂದ (ಟಿಟಿಎಫ್‌ಐ) ರದ್ದುಗೊಂಡಿತ್ತು.
ಕ್ರೀಡಾ ಸಚಿವಾಲಯ ವಿಶ್ವ ಚಾಂಪಿಯನ್‌ಶಿಪ್‌ಗೆ ಅನುಮತಿ ನೀಡಿದ್ದರೂ ಭಾರತದ ಪ್ರಮುಖ ಟಿಟಿ ಆಟಗಾರ ಹರ್ಮೀತ್ ದೇಸಾಯಿ ಅವರನ್ನು ಕೈಬಿಟ್ಟಿರುವುದು ಅಚ್ಚರಿಗೆ ಕಾರಣವಾಗಿದೆ. ಈ ನಡೆ ಟಿಟಿಎಫ್‌ಐಗೆ ಆಘಾತ ತಂದಿದೆ. ಹರ್ಮಿತ್ ಸ್ಥಾನದಲ್ಲಿ ಅಂಥೋನಿ ಅಮಲ್‌ರಾಜ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳುವಂತೆ ಸಚಿವಾಲಯವು ಟಿಟಿ ಒಕ್ಕೂಟಕ್ಕೆ ಕೇಳಿಕೊಂಡಿದೆ. ಸದ್ಯ ಭಾರತದ ಸಂಭವನೀಯರ ತಂಡ ಪುರುಷರ ವಿಭಾಗದಲ್ಲಿ ಅಚಂತಾ ಶರತ್ ಕಮಲ್, ಮಾನವ್ ಥಕ್ಕರ್, ಜಿ. ಸತ್ಯನ್, ಅಮಲ್‌ರಾಜ್‌ರನ್ನು ಒಳಗೊಂಡಿದ್ದರೆ, ಮಣಿಕಾ ಬಾತ್ರಾ , ಅರ್ಚನಾ ಕಾಮತ್ ಹಾಗೂ ಮಧುರಿಕಾ ಪಾಟ್ಕರ್ ಅವರು ಮಹಿಳಾ ವಿಭಾಗದಲ್ಲಿದ್ದಾರೆ. ರಾಷ್ಟ್ರೀಯ ರ್ಯಾಂಕಿಂಗ್‌ನಲ್ಲಿ ಹರ್ಮೀತ್‌ಗಿಂತ ಅಮಲ್‌ರಾಜ್ ಉನ್ನತ ಸ್ಥಾನದಲ್ಲಿದ್ದು ಅವರು ವಿಶ್ವಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಲು ಅವಕಾಶ ಮಾಡಿಕೊಡಬೇಕು ಎಂಬುದು ಕ್ರೀಡಾ ಸಚಿವಾಲಯದ ವಾದ ಎನ್ನಲಾಗಿದೆ.







