ಮಮತಾ ಸರಕಾರಕ್ಕೆ 20 ಲಕ್ಷ ರೂ. ದಂಡ ವಿಧಿಸಿದ ಸುಪ್ರೀಂ ಕೋರ್ಟ್

ಹೊಸದಿಲ್ಲಿ, ಎ. 11 : ರಾಜಕೀಯ ವಿಡಂಬನಾತ್ಮಕ 'ಭೋಬಿಶ್ಯೊಟೆರ್ ಭೂತ್' ಚಲನಚಿತ್ರ ಪ್ರದರ್ಶನಕ್ಕೆ ರಾಜ್ಯದಲ್ಲಿ ನಿಷೇಧ ಹೇರಿದ ಮಮತಾ ಬ್ಯಾನರ್ಜಿ ನೇತೃತ್ವದ ಪಶ್ಚಿಮ ಬಂಗಾಳ ಸರಕಾರವನ್ನು ತರಾಟೆಗೆ ತೆಗೆದುಕೊಂಡಿರುವ ಸುಪ್ರೀಂ ಕೋರ್ಟ್ ಸರಕಾರಕ್ಕೆ 20 ಲಕ್ಷ ರೂ. ದಂಡ ವಿಧಿಸಿದೆ.
ಸಿನೆಮಾದ ನಿರ್ಮಾಪಕರ ಹಾಗೂ ಚಿತ್ರ ಮಂದಿರ ಮಾಲಕರ ಅಭಿವ್ಯಕ್ತಿ ಮತ್ತು ವಾಕ್ ಸ್ವಾತಂತ್ರ್ಯವನ್ನು ಹತ್ತಿಕ್ಕಿದ್ದಕ್ಕಾಗಿ ಅವರ ನಡುವೆ ದಂಡ ಮೊತ್ತವನ್ನು ವಿತರಿಸಬೇಕು ಎಂದು ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಅವರ ನೇತೃತ್ವದ ಪೀಠ ಆದೇಶಿಸಿದೆ.
ಈ ಚಲನಚಿತ್ರದ ಪ್ರದರ್ಶನಕ್ಕೆ ಯಾವುದೇ ರೀತಿಯಲ್ಲಿ ಅಡ್ಡಿಯುಂಟು ಮಾಡಬಾರದೆಂದು ಸುಪ್ರೀಂ ಕೋರ್ಟ್ ಈ ಹಿಂದೆ ಸರಕಾರಕ್ಕೆ ಹೇಳಿತ್ತು. ರಾಜ್ಯಾದ್ಯಂತ ಸುಮಾರು 40ಕ್ಕೂ ಅಧಿಕ ಚಿತ್ರಮಂದಿರಗಳು ಹಾಗೂ ಮಲ್ಟಿಫ್ಲೆಕ್ಸುಗಳಲ್ಲಿ ಚಿತ್ರ ಪ್ರದರ್ಶನ ನಿಲ್ಲಿಸಲು ಬಲವಂತ ಪಡಿಸಲಾಯಿತು ಎಂದು ಚಿತ್ರ ನಿರ್ಮಾಪಕರು ದೂರಿ ಸಲ್ಲಿಸಿರುವ ಅಪೀಲನ್ನು ಪರಿಗಣಿಸಿದ್ದ ನ್ಯಾಯಾಲಯ ರಾಜ್ಯ ಸರಕಾರದ ಪ್ರತಿಕ್ರಿಯೆ ಕೋರಿತ್ತು.
ಅನಿಕ್ ದತ್ತಾ ಅವರ ನಿರ್ದೇಶನದ 'ಭೋಬಿಶ್ಯೊಟೆರ್ ಭೂತ್' ಫೆ.15ರಂದು ಬಿಡುಗಡೆಗೊಂಡಿತ್ತು. ರಾಜಕಾರಣಿಯೊಬ್ಬರ ಭೂತವೂ ಸೇರಿದಂತೆ ಭೂತಗಳ ಗುಂಪೊಂದು ನಿರಾಶ್ರಿತರ ಶಿಬಿರದಲ್ಲಿ ಸೇರಿ ಈಗಿನ ಸ್ಥಿತಿಗತಿಗೆ ತಕ್ಕಂತ ನಡೆದುಕೊಳ್ಳಲು ಯತ್ನಿಸುತ್ತಿರುವ ಕಥೆಯನ್ನು ಈ ಚಿತ್ರ ಹೊಂದಿದೆ. ಸೆನ್ಸಾರ್ ಮಂಡಳಿ ನವೆಂಬರ್ 2018ರಲ್ಲಿಯೇ ಈ ಚಿತ್ರಕ್ಕೆ ಯು/ಎ ಪ್ರಮಾಣಪತ್ರ ನೀಡಿತ್ತು.
ಆದರೆ ಚಿತ್ರದಲ್ಲಿನ ಕೆಲವೊಂದು ದೃಶ್ಯಗಳು ಸಾರ್ವಜನಿಕರ ಭಾವನೆಗಳಿಗೆ ಘಾಸಿಯುಂಟು ಮಾಡುವ ಹಾಗೂ ಕಾನೂನು ಸುವ್ಯವಸ್ಥೆ ಸಮಸ್ಯೆ ಸೃಷ್ಟಿಸುವ ಸಾಧ್ಯತೆಯಿದೆಯೆಂದು ಪಶ್ಚಿಮ ಬಂಗಾಳ ಪೊಲೀಸರ ವಿಶೇಷ ಬ್ರಾಂಚ್ ಸುತ್ತೋಲೆ ನಿರ್ಮಾಪಕರಿಗೆ ದೊರಕಿತ್ತು. ಬಿಡುಗಡೆಯಾದ ಮರುದಿನವೇ ಅದರ ಪ್ರದರ್ಶನ ತಡೆ ಹಿಡಿಯಲಾಗಿತ್ತು.
ಈ ಚಲನಚಿತ್ರದ ಪ್ರಧಾನ ಭೂಮಿಕೆಯಲ್ಲಿ ಸಬ್ಯಸಾಚಿ ಚಕ್ರವರ್ತಿ, ಮೂನ್ ಮೂನ್ ಸೇನ್, ಕೌಶಿಕ್ ಸೇನ್, ಬರುಣ್ ಚಂದ್ರ ಹಾಗೂ ಪರನ್ ಬಂದೋಪಾಧ್ಯಾಯ ಇದ್ದಾರೆ.







