ಸಿರ್ಸಾ ಡೇರದ ಬೆಂಬಲ ನಿರೀಕ್ಷೆಯಲ್ಲಿ ಬಿಜೆಪಿ: ಮನೋಹರ್ ಖಟ್ಟರ್

ಗುರ್ಮೀತ್ ಸಿಂಗ್ ,ಮನೋಹರ್ ಖಟ್ಟರ್
ಚಂಡಿಗಡ, ಎ.11: ಲೋಕಸಭಾ ಚುನಾವಣೆಯಲ್ಲಿ ಸಿರ್ಸಾದ ಡೇರಾ ಸಚ್ಚಾ ಸೌಧ ಬಿಜೆಪಿಗೆ ಬೆಂಬಲ ಕೊಡುವ ವಿಶ್ವಾಸವಿದೆ ಎಂದು ಹರ್ಯಾಣ ಮುಖ್ಯಮಂತ್ರಿ ಮನೋಹರ್ ಖಟ್ಟರ್ ಹೇಳಿದ್ದಾರೆ.
ಧಾರ್ಮಿಕ ಕೇಂದ್ರವಾಗಿರುವ ಡೇರ ಸಚ್ಚಾ ಸೌಧಾದ ವಿವಾದಿತ ಮುಖ್ಯಸ್ಥ ಗುರ್ಮೀತ್ ಸಿಂಗ್ ತನ್ನ ಇಬ್ಬರು ಮಹಿಳಾ ಅನುಯಾಯಿಯನ್ನು ಅತ್ಯಾಚಾರಗೈದ ಆರೋಪದಲ್ಲಿ 2017ರ ಆಗಸ್ಟ್ನಲ್ಲಿ 20 ವಷರ್ಗಳ ಜೈಲು ಶಿಕ್ಷೆಗೆ ಗುರಿಯಾಗಿದ್ದಾನೆ.
ಡೇರ ಸಚ್ಚಾ ಮುಖ್ಯಸ್ಥ ಗುರ್ಮೀತ್ ಸಿಂಗ್ ಶಿಕ್ಷೆಗೆ ಗುರಿಯಾದ ಸಂದರ್ಭದಲ್ಲಿ ಪಂಚಕುಲದಲ್ಲಿ ಸಿಂಗ್ ಅನುಯಾಯಿಗಳ ಹಿಂಸಾಚಾರ ನಿಯಂತ್ರಿಸಲು ವಿಫಲವಾಗಿ ತೀವ್ರ ಟೀಕೆಗೆ ಗುರಿಯಾಗಿದ್ದ ಮನೋಹರ್ ಇದೀಗ ಮತ ಕೇಳುತ್ತಿರುವ ತನ್ನ ನಿಲುವನ್ನು ಸಮರ್ಥಿಸಿಕೊಂಡಿದ್ದಾರೆ.
‘‘ಚುನಾವಣೆಯ ಸಮಯದಲ್ಲಿ ಮತ ಕೇಳುವುದು ರಾಜಕೀಯ ಪಕ್ಷದ ಹಕ್ಕು. ಬಿಜೆಪಿ ಕೂಡ ಡೇರಾ ಸಚ್ಚಾ ಸೌಧಾ ಸೇರಿದಂತೆ ಇತರ ಸಂಘಟನೆಗಳಿಂದ ಬೆಂಬಲ ಕೇಳುತ್ತಿದೆ. ನಮ್ಮ ಸಮಾಜ ವಿಶ್ವಾಸ ಹಾಗೂ ಹಲವು ನಂಬಿಕೆಗಳಿಂದ ಪ್ರಭಾವಿತವಾಗಿದೆ. ಹಲವು ವಿಧದ ಡೇರಾಗಳಿವೆ. ನಮ್ಮ ಪಕ್ಷದವರು ಸಚ್ಚಾ ಸೌಧಾ ಸಹಿತ ಎಲ್ಲ ಡೇರಗಳನ್ನು ಸಂಪರ್ಕಿಸಲಿದ್ದಾರೆ. ಎಲ್ಲರಿಂದಲೂ ನಮಗೆ ಬೆಂಬಲ ಸಿಗುವ ವಿಶ್ವಾಸವಿದೆ’’ ಎಂದು ಖಟ್ಟರ್ ಪತ್ರಕರ್ತರೊಂದಿಗೆ ನಡೆದ ಸಂವಾದದಲ್ಲಿ ತಿಳಿಸಿದರು.
2017ರಲ್ಲಿ ಡೇರಾ ಮುಖ್ಯಸ್ಥ ಶಿಕ್ಷೆಗೆ ಗುರಿಯಾದ ಸಂದರ್ಭದಲ್ಲಿ ಪಂಚಕುಲದಲ್ಲಿ ಪೊಲೀಸ್ ಹಾಗೂ ಡೇರಾ ಮುಖ್ಯಸ್ಥನ ಮಧ್ಯೆ ನಡೆದ ಘರ್ಷಣೆಯಲ್ಲಿ 42 ಮಂದಿ ಸಾವನ್ನಪ್ಪಿದ್ದರು. ಹಿಂಸಾಚಾರಕ್ಕೆ ಸಂಬಂಧಿಸಿ ಹಲವು ಪ್ರಕರಣಗಳು ಬಾಕಿ ಇವೆ.
2002ರಲ್ಲಿ ಸಿರ್ಸಾ ಮೂಲದ ಪತ್ರಕರ್ತ ರಾಮ್ ಚಂದರ್ ಛತ್ರಪತಿಯನ್ನು ಹತ್ಯೆಗೈದ ಆರೋಪದಲ್ಲಿ ಈ ವರ್ಷದ ಜನವರಿಯಲ್ಲಿ ಗುರ್ಮೀತ್ ಸಿಂಗ್ಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ. ಡೇರಾ ಸಚ್ಚಾ ಮುಖ್ಯಸ್ಥ ಸಿಂಗ್ 2014ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಬೆಂಬಲ ಘೋಷಿಸಿದ್ದ. 2014ರಲ್ಲಿ ನಡೆದಿದ್ದ ಅಸೆಂಬ್ಲಿ ಚುನಾವಣೆಯ ವೇಳೆಯೂ ಡೇರಾ, ಬಿಜೆಪಿಯನ್ನು ಬೆಂಬಲಿಸಿತ್ತು.







