ಮೋದಿಯನ್ನು ಮುಂದಿಟ್ಟು ಸಂಸದ ಅಭ್ಯರ್ಥಿಗೆ ಮತ ಚಲಾಯಿಸಿ !
ದ.ಕ. ಬಿಜೆಪಿ ಅಭ್ಯರ್ಥಿ ಪರ ಚಕ್ರವರ್ತಿ ಸೂಲಿಬೆಲೆ ಪ್ರಚಾರ

ಮಂಗಳೂರು, ಎ.11: ಪ್ರಧಾನ ಮಂತ್ರಿ ಮೋದಿಯವರನ್ನು ಮುಂದಿಟ್ಟುಕೊಂಡು ಈ ಬಾರಿ ಸಂಸದ ಅಭ್ಯರ್ಥಿಗಳಿಗೆ ಮತ ಚಲಾಯಿಸಿ ಎಂದು ಹೇಳಿರುವ ಮೋದಿ ಟೀಂ ಮುಖ್ಯಸ್ಥ ಚಕ್ರವರ್ತಿ ಸೂಲಿಬೆಲೆ, ಮಂಗಳೂರು ಹಾಗೂ ಕರ್ನಾಟಕದ ಗೌರವದ ಜತೆಗೆ ರಾಷ್ಟ್ರದ ಗೌರವ ಮುಖ್ಯ ಆಗಬೇಕು ಎಂದು ಬಿಜೆಪಿ ಪರ ಮತಯಾಚನೆ ಮಾಡಿದ್ದಾರೆ.
ನಗರದ ಹೊಟೇಲೊಂದರಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲೋಕಸಭಾ ಚುನಾವಣೆಯಲ್ಲಿ ರಾಷ್ಟ್ರದ ಚಿಂತನೆ ಹಿಂದಕ್ಕೆ ಸರಿಯದಂತೆ ಮತ ಚಲಾಯಿಸಬೇಕು ಎಂದರು.
ಕಳೆದ ನಾಲ್ಕೂವರೆ ತಿಂಗಳಿನಿಂದ ಮೋದಿ ಟೀಂ ಕಟ್ಟಿಕೊಂಡು ನರೇಂದ್ರ ಮೋದಿಯವರು ಮತ್ತೆ ಪ್ರಧಾನಿಯಾಗಬೇಕೆಂಬ ನಿಟ್ಟಿನಲ್ಲಿ ಪ್ರಚಾರ ನಡೆಸುತ್ತಿರುವುದಾಗಿ ಹೇಳಿದರು. ರಥಯಾತ್ರೆ ಸೇರಿದಂತೆ 120ಕ್ಕೂ ಅಧಿಕ ಚುನಾವಣಾ ರ್ಯಾಲಿಗಳನ್ನು ನಡೆಸಿದ್ದು, ಈ ಸಂದರ್ಭ ನಗರ ಹಳ್ಳಿಗಳಿಗೂ ಭೇಟಿ ನೀಡಿದ್ದೇನೆ. ಈ ಸಂದರ್ಭ ಮೋದಿ ಅಲೆ ಗೋಚರವಾಗಿದ್ದು, ಮಂಗಳೂರಿಗೆ ಎ. 13ರಂದು ಮೋದಿ ಆಗಮನದ ವೇಳೆ ಈ ಮೋದಿ ಅಲೆ ಸ್ಪಷ್ಟವಾಗಲಿದೆ ಎಂದರು.
ಮಾಜಿ ಪ್ರಧಾನಿ ದೇವೇಗೌಡರು ಕೂಡಾ ಇದೀಗ ಮೈತ್ರಿಯೊಂದಿಗೆ 10 ಸೀಟುಗಳನ್ನಾದರೂ ಗೆಲ್ಲಲಿಲ್ಲವಾದರೆ ಅವಮಾನ ಎಂದು ಹೇಳುವ ಮೂಲಕ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ ದಿಕ್ಕು ಯಾವ ಕಡೆಗೆ ಇದೆ ಎಂಬುದನ್ನು ಹೇಳಿದ್ದಾರೆ ಎಂದು ಅವರು ಹೇಳಿದರು.
ಕಾಂಗ್ರೆಸ್ ತನ್ನ ಪ್ರಣಾಳಿಕೆಯ ಮೂಲಕ ತನ್ನ ಸೋಲನ್ನು ತಾನೇ ಬರೆದುಕೊಂಡಿದೆ ಎಂದು ಆಪಾದಿಸಿದ ಅವರು, ಕಾಂಗ್ರೆಸ್ ಪ್ರಣಾಳಿಕೆಯು ದೇಶವನ್ನು ಛಿದ್ರವನ್ನಾಗಿಸುವ ಚಿಂತನೆಯನ್ನು ಹೊಂದಿದೆ. ಸೈನಿಕರ ರಕ್ಷಣೆಗಿರುವ ಅಫ್ಸಾ ಕಾಯಿದೆಯನ್ನು ತೆಗೆದುಬಿಡಬೇಕು ಎಂದು ಕಾಂಗ್ರೆಸ್ ಘೋಷಿಸಿಕೊಂಡಿದೆ. ರಾಹುಲ್ ಗಾಂಧಿಯವರು ಹೇಳಿರುವಂತೆ ಬಡವರಿಗೆ 72,000 ರೂ. ನೀಡುವುದು ಹಗಲು ಕನಸು ಎಂದು ಹೇಳಿದರು.
ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ 22ಕ್ಕೂ ಅಧಿಕ ಹಾಗೂ ದೇಶದಲ್ಲಿ 300ಕ್ಕೂ ಅಧಿಕ ಸ್ಥಾನಗಳನ್ನು ಬಿಜೆಪಿ ಪಡೆಯಲಿದೆ ಎಂದು ಅವರು ಹೇಳಿದರು.
ಪಾಕ್ ಪ್ರಧಾನಿ ಇಮ್ರಾನ್ ಖಾನ್ ಹೇಳಿಕೆ ಕುರಿತಂತೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಚಕ್ರವರ್ತಿ ಸೂಲಿಬೆಲೆ, ಕೆಲ ದಿನಗಳ ಹಿಂದೆ ನರೇಂದ್ರ ಮೋದಿಯಿಂದ ಪಾಕ್- ಭಾರತದ ನಡುವೆ ಶಾಂತಿ ಮಾತುಕತೆಗೆ ಭಂಗ ಎನ್ನುತ್ತಿದ್ದವರು, ಇದೀಗ ನರೇಂದ್ರ ಮೋದಿಯ ಭಾಷಣ ಕೇಳಿ ಹೊಸ ಹೇಳಿಕೆ ನೀಡಿದ್ದಾರೆ. ಇದು ಪ್ರತಿಪಕ್ಷಗಳಿಗೆ ಅಸ್ತ್ರ ನೀಡಬೇಕೆಂಬ ನಿಟ್ಟಿನಲ್ಲಿ ಅಥವಾ ಕಾಂಗ್ರೆಸ್ ಈ ರೀತಿಯಲ್ಲ ಮಾತನಾಡಿಸಿದೆ ಎಂಬಂತಿದೆ ಎಂದರು.







