ನಟ ಶಿವರಾಜ್‍ಕುಮಾರ್ ವಿರುದ್ದ ಕುಮಾರ್ ಬಂಗಾರಪ್ಪ ವಾಗ್ದಾಳಿ

ಶಿವಮೊಗ್ಗ, ಎ. 11: ಚಿತ್ರನಟ ಶಿವರಾಜ್ ಕುಮಾರ್ ರವರು, 'ಕವಚ' ಚಲನಚಿತ್ರ ಪ್ರಚಾರದ ನೆಪದಲ್ಲಿ ಶಿವಮೊಗ್ಗ ಕ್ಷೇತ್ರದಲ್ಲಿ ರಾಜಕೀಯ ಮಾಡಲು ಬಂದಿದ್ದಾರೆ ಎಂದು ಬಿಜೆಪಿ ಶಾಸಕ ಕುಮಾರ್ ಬಂಗಾರಪ್ಪ ಆರೋಪಿಸಿದ್ದಾರೆ.
ಗುರುವಾರ ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು. 'ಸಿನಿಮಾದ ಕವಚ ಹಾಕಿಕೊಂಡು ರಾಜಕೀಯ ಮಾಡುತ್ತಿದ್ದಾರೆ. ಅವರಿಗೆ ರಾಜಕೀಯ ಮಾಡುವ ಉದ್ದೇಶವಿದ್ದರೇ, ಅವರು ಧರಿಸಿರುವ ಕವಚ ತೆಗೆದಿಡಲಿ. ಅದು ಬಿಟ್ಟು ಸಿನಿಮಾ ಪ್ರಚಾರದ ನೆಪದಲ್ಲಿ ರಾಜಕೀಯ ಮಾಡುವುದು ಸರಿಯಲ್ಲ ಎಂದು ತಿಳಿಸಿದ್ದಾರೆ.
ಚುನಾವಣೆಗಳು ಸಮೀಪಿಸುತ್ತಿದ್ದಂತೆ ಶಿವರಾಜ್ ಕುಮಾರ್ ಹಾಗೂ ಗೀತಾ ಶಿವರಾಜ್ ಕುಮಾರ್ ಪ್ರತ್ಯೇಕ್ಷರಾಗುತ್ತಾರೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಗೀತಾ, ಶಿವಮೊಗ್ಗದಲ್ಲಿ ಮನೆ ಮಾಡುತ್ತೆನೆ. ಇಲ್ಲಿಯೇ ನೆಲೆಸುತ್ತೆನೆ. ಜನರ ಸೇವೆ ಮಾಡುತ್ತೆನೆ ಎಂದು ಹೇಳಿಕೆ ನೀಡಿದ್ದರು. ಆದರೆ ಆನಂತರ ಅವರು ಕ್ಷೇತ್ರದಲ್ಲಿ ಕಾಣಸಿಗಲಿಲ್ಲ. ಇದೀಗ ಮಧು ಬಂಗಾರಪ್ಪ ಪರ ಪ್ರಚಾರಕ್ಕೆ ಆಗಮಿಸಿದ್ದಾರೆ ಎಂದು ಟೀಕಾಪ್ರಹಾರ ನಡೆಸಿದರು.
ರಾಜಕೀಯ ದ್ವೇಷವಿಟ್ಟುಕೊಂಡು ಮಾತನಾಡಬಾರದು ಎಂದು ಚಿತ್ರನಟ ಶಿವರಾಜ್ ಕುಮಾರ್ ಹೇಳಿಕೆ ನೀಡುತ್ತಾರೆ. ಅವರು ಒಮ್ಮೆ ಮಂಡ್ಯಕ್ಕೆ ಹೋಗಿ ಅಲ್ಲಿನ ರಾಜಕೀಯ ಪರಿಸ್ಥಿತಿ ಗಮನಿಸಲಿ. ಆಗ ಯಾರು ದ್ವೇಷ ಮಾಡುತ್ತಿದ್ದಾರೆ ಎಂಬುವುದರ ಅರಿವಾಗುತ್ತದೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯೆ ನೀಡಿದರು.
ತಾವು ಸೋತರೂ ಕ್ಷೇತ್ರದ ಅಭಿವೃದ್ದಿಗೆ ಸಾಕಷ್ಟು ಹಣವನ್ನು ರಾಜ್ಯ ಸರ್ಕಾರದಿಂದ ಬಿಡುಗಡೆ ಮಾಡಿಸಿರುವುದಾಗಿ ಮಧು ಬಂಗಾರಪ್ಪರವರು ಹೇಳುತ್ತಿದ್ದಾರೆ. ಚುನಾವಣೆಯಲ್ಲಿ ಸೋತರೂ ಅನುದಾನ ಬಿಡುಗಡೆ ಮಾಡಿಸುತ್ತಾರೆಂದರೇ, ಅವರು ಸಾಕಷ್ಟು ಪವರ್‍ಫುಲ್ ಇದ್ದಾರೆ. ಅವರನ್ನು ಮತದಾರರು ಮತ್ತೊಮ್ಮೆ ಸೋಲಿಸಬೇಕು. ಆಗ ಜಿಲ್ಲೆಯ ಅಭಿವೃದ್ದಿಗೆ ಯಾ ರೀತಿ ಕೆಲಸ ಮಾಡುತ್ತಾರೆ ಎಂಬುವುದು ಗೊತ್ತಾಗುತ್ತದೆ ಎಂದು ಕುಟುಕಿದರು.
ಚುನಾವಣೆ ಸಂದರ್ಭದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ತಮ್ಮ ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದಾರೆ. ಹೀಗಾಗಿಯೇ ಮಂಡ್ಯ ಜಿಲ್ಲಾಧಿಕಾರಯನ್ನು ಚುನಾವಣಾ ಆಯೋಗ ಬೇರೇಡೆ ವರ್ಗಾವಯಿಸಿದೆ. ಅಧಿಕಾರ ದುರ್ಬಳಕೆ ಆಗಿರುವುದಕ್ಕೆ ಇದಕ್ಕಿಂತ ಸಾಕ್ಷಿ ಬೇಕಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.







