ಈಶ್ವರಪ್ಪರ ಭಾಷೆ ಸರಿಯಾಗಲು ಮಠದಲ್ಲಿ ಕಾಲ ಕಳೆಯಲಿ: ಸಿ.ಎಂ.ಇಬ್ರಾಹಿಂ

ಬಾಗಲಕೋಟೆ, ಎ. 11: ಈಶ್ವರಪ್ಪನವರು ನಮ್ಮ ಸ್ನೇಹಿತರು. ಚುನಾವಣೆ ಮುಗಿಯುವವರೆಗೂ ಇಂತವೆಲ್ಲ ನಡೆಯುತ್ತವೆ. ಆಮೇಲೆ ಎಲ್ಲ ಸರಿಯಾಗುತ್ತದೆ. ಅವರು ಒಳ್ಳೆಯ ಶಬ್ದ ಬಳಸುವಂತಾಗಲಿ. ಈ ನಿಟ್ಟಿನಲ್ಲಿ ಈಶ್ವರಪ್ಪ ಮೂರು ತಿಂಗಳು ಯಾವುದಾದರೊಂದು ಮಠದಲ್ಲಿ ಕಾಲ ಕಳೆಯುವುದು ಉತ್ತಮ ಎಂದು ಸಿ.ಎಂ. ಇಬ್ರಾಹೀಂ ಹೇಳಿದರು.
ಗುರುವಾರ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಜನರ ಆಶೀರ್ವಾದವೇ ನಮಗೆ ಶ್ರೀರಕ್ಷೆ. ನಾನು ಒಬ್ಬ ಮಠ ಇಲ್ಲದ ಸ್ವಾಮೀಜಿ ಇದ್ದಂತೆ. ಈಶ್ವರಪ್ಪನವರ ಭಾಷೆ ಸಂಸ್ಕೃತಿ ಹೇಗಿದೆ ಅಂತ ಅವರ ಹೇಳಿಕೆಯಿಂದ ಗೊತ್ತಾಗುತ್ತದೆ ಎಂದು ಲೇವಡಿ ಮಾಡಿದರು.
ಮೈಸೂರಿನ ಬಿಜೆಪಿ ಸಮಾವೇಶದಲ್ಲಿ ಪ್ರಧಾನಿ ಮೋದಿ ಮಂಡ್ಯ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಹೆಸರು ಪ್ರಸ್ತಾಪ ಮಾಡಿದರು. ಯಾವಾಗ ಅವರು ಸುಮಲತಾ ಹೆಸರು ಪ್ರಸ್ತಾಪ ಮಾಡಿದರೋ ಆವಾಗಲೆ ನಮ್ಮ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರ ಗೆಲುವು ಪಕ್ಕಾ ಆಗಿದೆ ಎಂದು ಇಬ್ರಾಹಿಂ ಭರವಸೆ ವ್ಯಕ್ತಪಡಿಸಿದರು.
ಪ್ರಧಾನಿ ಮೋದಿ ಅವರಿಗೆ ನಾವು ಎಲ್ಲ ಕಡೆ ಗೆಲ್ಲುತ್ತೇವೆ ಎಂದು ವರದಿ ಹೋಗಿದೆ. ಹೀಗಾಗಿ ರಾಜ್ಯದಲ್ಲಿ ಆದಾಯ ತೆರಿಗೆ (ಐಟಿ) ದಾಳಿ ನಡೆಸಲು ಆರಂಭಿಸಿದ್ದಾರೆ. ಬಿಜೆಪಿ ಅಭ್ಯರ್ಥಿಗಳ ಮನೆಯ ಮೇಲೂ ಐಟಿ ದಾಳಿ ಮಾಡಬೇಕಿತ್ತು ಎಂದು ಇಬ್ರಾಹೀಂ ಅಸಮಾಧಾನ ವ್ಯಕ್ತಪಡಿಸಿದರು.







