ತೇಜಸ್ವಿ ಸೂರ್ಯ ವಿರುದ್ಧ ಸುದ್ದಿ ಬಿತ್ತರಿಸದಂತೆ ತಡೆಕೋರಿ ಅರ್ಜಿ: ಆದೇಶ ಕಾಯ್ದಿರಿಸಿದ ಹೈಕೋರ್ಟ್

ಬೆಂಗಳೂರು, ಎ.11: ಮಹಿಳೆಯರಿಗೆ ಸಂಬಂಧಿಸಿದಂತೆ ದಕ್ಷಿಣ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ವಿರುದ್ಧ ಯಾವುದೇ ನಕರಾತ್ಮಕ ಸುದ್ದಿಗಳನ್ನು ಮಾಧ್ಯಮಗಳು ಬಿತ್ತರಿಸದಂತೆ ಅಧೀನ ನ್ಯಾಯಾಲಯ ನೀಡಿದ್ದ ಆದೇಶ ರದ್ದು ಕೋರಿ ಸಲ್ಲಿಸಿದ್ದ ಅರ್ಜಿ ಸಂಬಂಧ ಹೈಕೋರ್ಟ್ ಎರಡು ಕಡೆಯವಾದ ಪ್ರತಿವಾದ ಆಲಿಸಿ ಆದೇಶವನ್ನು ಕಾಯ್ದಿರಿಸಿದೆ.
ಈ ಕುರಿತು ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಲ್.ನಾರಾಯಣಸ್ವಾಮಿ ಹಾಗೂ ನ್ಯಾಯಮೂರ್ತಿ ಪಿ.ಎಸ್.ದಿನೇಶ್‌ಕುಮಾರ್ ಅವರಿದ್ದ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು.
ಅರ್ಜಿದಾರರ ಪರ ವಾದಿಸಿದ ವಕೀಲ ಬಿ.ಎನ್.ಹರೀಶ್ ಅವರು, ತೇಜಸ್ವಿ ಸೂರ್ಯ ಅವರ ವಿರುದ್ಧ ಮಹಿಳೆಯನ್ನು ಕೆಟ್ಟದಾಗಿ ನಡೆಸಿಕೊಂಡ ಆರೋಪವಿದೆ. ಹೀಗಾಗಿ, ಅವರ ಬಗ್ಗೆ ಮಾಧ್ಯಮಗಳಲ್ಲಿ ಹಾಗೂ ಸೋಷಿಯಲ್ ಮೀಡಿಯಾಗಳಲ್ಲಿ ಚರ್ಚೆಗಳು ನಡೆಯುತ್ತವೆ. ಇದನ್ನೆ ತಪ್ಪು ಎಂಬಂತೆ ನಕರಾತ್ಮಕ ಸುದ್ದಿಗಳನ್ನು ಬಿತ್ತರಿಸದಂತೆ ಬೆಂಗಳೂರಿನ ಅಧೀನ ನ್ಯಾಯಾಲಯದಿಂದ ಆದೇಶವನ್ನು ತಂದಿದ್ದಾರೆ. ಇಂತಹ ಆದೇಶದಿಂದ ಪ್ರಜಾಪ್ರಭುತ್ವಕ್ಕೆ ಹಾಗೂ ಮತದಾರರಿಗೆ ಅನ್ಯಾಯ ಮಾಡಿದಂತಾಗುತ್ತದೆ ಎಂದು ಪೀಠಕ್ಕೆ ತಿಳಿಸಿದರು.
ಜನಪ್ರತಿನಿಧಿಯಾಗಲು ಲೋಕಸಭೆ ಚುನಾವಣೆಗೆ ನಿಲ್ಲುತ್ತಿರುವ ತೇಜಸ್ವಿ ಸೂರ್ಯ ಅವರ ನಡವಳಿಕೆ ಬಗ್ಗೆ ಮತದಾರರಲ್ಲಿ ಸ್ಪಷ್ಟತೆ ಮೂಡಬೇಕು. ಆದರೆ, ಇಂತಹ ವಿಚಾರಗಳ ಬಗ್ಗೆ ಮಾತನಾಡದಂತೆ ನಿರ್ಬಂಧ ಕೋರಿ ನ್ಯಾಯಾಲಯಕ್ಕೆ ಹೋಗಿರುವುದು ಸರಿಯಲ್ಲ. ಹಾಗೂ ಅಧೀನ ನ್ಯಾಯಾಲಯ ಕೂಡ ಮಧ್ಯ ಪ್ರವೇಶಿಸಿ ನಕರಾತ್ಮಕ ಸುದ್ದಿಗಳನ್ನು ಬಿತ್ತರಿಸದಂತೆ ಆದೇಶಿಸಿದ್ದು, ಈ ಆದೇಶವನ್ನು ರದ್ದುಗೊಳಿಸಬೇಕೆಂದು ಪೀಠಕ್ಕೆ ಮನವಿ ಮಾಡಿದರು.
ಒಂದು ಬಾರಿ ಚುನಾವಣಾ ಆಯೋಗ ಚುನಾವಣೆ ದಿನಾಂಕವನ್ನು ಘೋಷಣೆ ಮಾಡಿದ ಮೇಲೆ ಯಾವುದೇ ಕಾರಣಕ್ಕೂ ಚುನಾವಣಾ ಅಭ್ಯರ್ಥಿಯು ತನ್ನ ಹೇಳಿಕೆಗಳ ಬಗ್ಗೆ ಹಾಗೂ ಸಾರ್ವಜನಿಕ ಚರ್ಚೆಗಳ ಬಗ್ಗೆ ನ್ಯಾಯಾಲಯದಲ್ಲಿ ನಿರ್ಬಂಧದ ಆದೇಶಕ್ಕೆ ಅರ್ಜಿ ಹಾಕಬಾರದು. ಆದರೆ, ತೇಜಸ್ವಿ ಅವರು ತಮಗೆ ಸಂಬಂಧಿಸಿದ ಸುದ್ದಿಗಳನ್ನು ಬಿತ್ತರಿಸದಂತೆ ನಿರ್ಬಂಧದ ಆದೇಶವನ್ನು ತಂದಿದ್ದಾರೆ ಎಂದು ಪೀಠಕ್ಕೆ ತಿಳಿಸಿದರು.
ಪ್ರತಿವಾದಿಗಳ ಪರ ವಾದಿಸಿದ ಹಿರಿಯ ವಕೀಲ ಅಶೋಕ್ ಹಾರನಹಳ್ಳಿ ಅವರು, ಬಿಜೆಪಿ ಅಭ್ಯರ್ಥಿಯಾಗಿರುವ ತೇಜಸ್ವಿ ಸೂರ್ಯ ಅವರನ್ನು ನಿಂದಿಸುವ ಹಾಗೂ ತೇಜೋವಧೆ ಮಾಡುವುದಕ್ಕಾಗಿಯೆ ಅರ್ಜಿದಾರರು ನ್ಯಾಯಪೀಠಕ್ಕೆ ಪಿಐಎಲ್ ಸಲ್ಲಿಸಿದ್ದಾರೆ. ಮುಂಬೈ ಕೋರ್ಟ್ ಹಾಗೂ ಸುಪ್ರೀಂಕೋರ್ಟ್ ಚುನಾವಣೆ ಸಂದರ್ಭ ಸೇರಿದಂತೆ ಹಲವು ಸಂದರ್ಭಗಳಲ್ಲಿ ಜನಪ್ರತಿನಿಧಿಗಳ ಬಗ್ಗೆ ಹಾಗೂ ಚುನಾವಣಾ ಅಭ್ಯರ್ಥಿಗಳ ಬಗ್ಗೆ ನಕರಾತ್ಮಕ ಸುದ್ದಿಗಳನ್ನು ಬಿತ್ತರಿಸದಂತೆ ನಿರ್ಬಂಧ ಹೇರಿರುವ ಉದಾಹರಣೆಗಳಿವೆ ಎಂದು ಪೀಠಕ್ಕೆ ತಿಳಿಸಿದರು. ವಕೀಲರ ವಾದ ಆಲಿಸಿದ ನ್ಯಾಯಪೀಠವು ಆದೇಶವನ್ನು ಕಾಯ್ದಿರಿಸಿತು.







