ಉಡುಪಿ: ಗುರಿಕಾರರ ಸಮಾವೇಶ, ಮೀನುಗಾರ ಮಹಿಳೆಯರಿಗೆ ಸನ್ಮಾನ

ಉಡುಪಿ, ಎ.11: ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ಅಂಬಲಪಾಡಿ ಮತ್ತು ಉಡುಪಿ ಜಿಲ್ಲಾ ಮೊಗವೀರ ಯುವ ಸಂಘಟನೆಯ ನೇತೃತ್ವದಲ್ಲಿ ಗುರಿಕಾರರ ಸಮಾವೇಶ, ಗೌರವಧನ ವಿತರಣೆ ಮತ್ತು ಮತ್ಸಜ್ಯೋತಿ ಮೀನುಗಾರ ಮಹಿಳೆಯರಿಗೆ ಗೌರವ ಪುರಸ್ಕಾರ ಹಾಗೂ ಸಾಮೂಹಿಕ ವಿವಾಹದ ವೀಳ್ಯಶಾಸ್ತ್ರ ಕಾರ್ಯಕ್ರಮ ಇಂದು ಅಂಬಲಪಾಡಿಯ ಫ್ಯಾಮಿಲಿ ಸಭಾಂಗಣದಲ್ಲಿ ನೆರವೇರಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್‌ನ ಪ್ರವರ್ತಕ ಡಾ.ಜಿ.ಶಂಕರ್, ಗುರಿಕಾರರು ಸಮಾಜದ ಆಗುಹೋಗುಗಳ ಬಗ್ಗೆ ಚಿಂತನೆ ಮಾಡಬೇಕು. ಮೊಗವೀರರ ಕಷ್ಟಗಳಿಗೆ ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ಹಾಗೂ ಮೊಗವೀರ ಯುವವೇದಿಕೆ ಸದಾ ಸ್ಪಂದಿಸುತ್ತದೆ ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಮೊಗವೀರ ಸಮಾಜದ ಕೂಡುಕಟ್ಟಿನ ಎಲ್ಲ ನಿಯಮ ಗಳನ್ನು ಸಮರ್ಪಕವಾಗಿ ಪಾಲಿಸಿಕೊಂಡು ಬಂದ ಬೆಳ್ಳಂಪಳ್ಳಿಯ ಮೊಗವೀರ ಗ್ರಾಮಸಭಾ, ಮಣಿಪುರ ಮೊಗವೀರಸಭಾ, ಕುಂದಾಪುರದ ನಾರಾಯಣ ಮೊಗವೀರಸಭಾವನ್ನು ಗೌರವಿಸಲಾಯಿತು.
ಮೊಗವೀರ ಯುವ ಸಂಘಟನೆಯ ಜಿಲ್ಲಾಧ್ಯಕ್ಷ ವಿನಯ ಕರ್ಕೇರ ಅಧ್ಯಕ್ಷತೆ ವಹಿಸಿ ಮಾತನಾಡಿ, ಗುರಿಕಾರರು ಮೊಗವೀರ ಸಮಾಜದ ಪರಂಪರೆಯನ್ನು ಎತ್ತಿಹಿಡಿಯುವವರು. ಸಮಾಜದ ಅಭಿವೃದ್ಧಿಯಲ್ಲಿ ಇವರ ಕೊಡುಗೆ ಅಪಾರ ಎಂದರು.
ದ.ಕ.ಮೊಗವೀರ ಮಹಾಜನ ಸಂಘ ಉಚ್ಚಿಲದ ಅಧ್ಯಕ್ಷ ಜಯ ಸಿ. ಕೋಟ್ಯಾನ್, ಬೆಣ್ಣೆಕುದ್ರು-ಬಾರಕೂರಿನ ಮೊಗವೀರ ಸಂಯುಕ್ತ ಸಭಾ ಅಧ್ಯಕ್ಷ ವಿಶ್ವನಾಥ ಮಾಸ್ತರ್ ಮಾತನಾಡಿದರು. ಹಿರಿಯರ ಸಂಪ್ರದಾಯಗಳನ್ನು ವ್ಯವಸ್ಥಿತವಾಗಿ ನಿರ್ವಹಿಸುತ್ತಾ ಬಂದಿರುವ ಗುರಿಕಾರರು ನಮ್ಮ ಸಂಪ್ರದಾಯ ಗಳನ್ನು ಎತ್ತಿಹಿಡಿಯಬೇಕು. ಇತ್ತೀಚಿನ ದಿನಗಳಲ್ಲಿ ವಿವಾಹ ಸಮಾರಂಭಗಳಲ್ಲಿ ನಡೆಯುತ್ತಿರುವ ವಿವಾಹ ಸಮಾರಂಭದ ದುಂದುವೆಚ್ಚಗಳಿಗೆ ಕಡಿವಾಣ ಹಾಕಬೇಕಿದೆ ಎಂದರು.
ಮೊಗವೀರ ಸಮಾಜದ 41 ಜೋಡಿಗಳಿಗೆ ಸಾಮೂಹಿಕ ವಿವಾಹದ ವೀಳ್ಯಶಾಸ್ತ್ರ ಮಾಡಲಾಯಿತು. ಗುರಿಕಾರರ ಸಂಪ್ರದಾಯದ ಬಗ್ಗೆ ಹೋಬಳಿಯ ಗುರಿಕಾರರು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.
‘ಮತ್ಸಜ್ಯೋತಿ’ ಪುರಸ್ಕೃತರು: ಕೋಟೇಶ್ವರದ ಕೂಸಿ ಯಾನೆ ಲಕ್ಷ್ಮೀ ಮರಕಾಲ್ತಿ, ಕುಂದಾಪುರದ ಸುಶೀಲಾ ಮೊಗೇರ್ತಿ, ಬೈಂದೂರಿನ ನಾಗಮ್ಮಾ, ಹಾಲಾಡಿಯ ಸುಶೀಲಾ ಮೊಗೇರ್ತಿ, ಕೋಟೇಶ್ವರದ ಲಕ್ಷ್ಮೀ ಮರಕಾಲ್ತಿ, ಹೆಮ್ಮಾಡಿಯ ಪರಮೇಶ್ವರಿ ಮೊಗವೀರ, ಸಾಲಿಗ್ರಾಮದ ರಾಧು ಕುಂದರ್, ಬ್ರಹ್ಮಾವರದ ಭಾಗಿ ಮರಕಾಲ್ತಿ, ಪೆರ್ಡೂರಿನ ಕಿಟ್ಟಿ ಸಾಲ್ಯಾನ್, ಉಪ್ಪೂರಿನ ಸರಸು ಮರಕಾಲ್ತಿ, ಪಡುಬಿದ್ರಿಯ ಸುನಂದಾ ಕರ್ಕೇರ, ಪಡುಬಿದ್ರಿಯ ಆನಂದಿ ಆರ್.ಕುಂದರ್, ಮಲ್ಪೆಯ ದೇವಿ ಕುಂದರ್ ಹಾಗೂ ಉಳ್ಳಾಲದ ಮೀನಾಕ್ಷಿ ಇವರನ್ನು ಗೌರವಿಸಲಾಯಿತು.
ಬಗ್ವಾಡಿ ಹೋಬಳಿ ಮೊಗವೀರ ಮಹಾಜನ ಸೇವಾ ಸಂಘದ ಶಾಖಾಧ್ಯಕ್ಷ ಕೆ.ಕೆ.ಕಾಂಚನ್, ಮೊಗವೀರ ಯುವ ಸಂಘಟನೆಯ ನಿಕಟಪೂರ್ವ ಅಧ್ಯಕ್ಷ ಗಣೇಶ್ ಕಾಂಚನ್, ಉದ್ಯಮಿ ಶಿವ ಬಿ. ಅಮೀನ್ ಉಪಸ್ಥಿತರಿದ್ದರು.
ಸತೀಶ್ ಎಂ.ನಾಯ್ಕ ಸ್ವಾಗತಿಸಿದರು. ಶಿವರಾಂ ಕೆ.ಎಂ. ವಂದಿಸಿ, ಚಂದ್ರೇಶ್ ಪಿತ್ರೋಡಿ ಕಾರ್ಯಕ್ರಮ ನಿರೂಪಿಸಿದರು.










