ಸಿಎಂ ಕುಮಾರಸ್ವಾಮಿ - ಸುಮಲತಾ ವಾಕ್ಸಮರ

ಮಂಡ್ಯ, ಎ.11: ತೀವ್ರ ಕುತೂಹಲ ಕೆರಳಿಸಿರುವ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್ ಅವರ ವಾಕ್ಸಮರ ಚರ್ಚೆಗೆ ಗ್ರಾಸವಾಗಿದೆ.
ಮೈತ್ರಿ ಅಭ್ಯರ್ಥಿಯಾದ ಪುತ್ರ ನಿಖಿಲ್ ಪರ ಗುರುವಾರ ಚುನಾವಣಾ ಪ್ರಚಾರ ಕೈಗೊಂಡ ಕುಮಾರಸ್ವಾಮಿ, ಸುಮಲತಾ ವಿರುದ್ಧ ವಾಗ್ದಾಳಿ ನಡೆಸಿದರೆ, ಪಕ್ಷೇತರ ಅಭ್ಯರ್ಥಿ ಸುಮಲತಾ ಕೂಡ ಪ್ರತಿ ದಾಳಿ ಮೂಲಕ ಎದುರೇಟು ನೀಡಿದ್ದಾರೆ.
ಮದ್ದೂರು ತಾಲೂಕಿನಲ್ಲಿ ಪ್ರಚಾರ ವೇಳೆ ಮಾತನಾಡಿದ ಕುಮಾರಸ್ವಾಮಿ, ಪಕ್ಷೇತರ ಅಭ್ಯರ್ಥಿಯ ಎಲ್ಲಾ ಗಿಮಿಕ್‍ಗಳು ಮುಗಿದಿದ್ದು, ಮುಂದಿನ ದಿನಗಳಲ್ಲಿ ಅವರ ಪ್ರಚಾರ ಸಭೆಯಲ್ಲಿ ಅವರೇ ಕಲ್ಲೆಸೆದುಕೊಂಡು ಜೆಡಿಎಸ್ ವಿರುದ್ದ ಗೂಬೆ ಕೂರಿಸುವ ತಂತ್ರವನ್ನು ಹೆಣೆದಿದ್ದಾರೆ ಎಂದು ಆರೋಪಿಸಿದರು.
ಸಂದೇಶ್ ನಾಗರಾಜು ನಮ್ಮಿಂದ ರಾಜಕೀಯ ಜನ್ಮ ಪಡೆದವರು. ಒಂದು ಚುನಾವಣೆಯಲ್ಲೂ ಗೆಲ್ಲದ ಅವರನ್ನು ಗೆಲ್ಲಿಸಿದ್ದು ನಾವು. ಈಗ ನಮ್ಮ ವಿರುದ್ದವೇ ನಿಂತಿದ್ದಾರೆ ಎಂದೂ ಅವರು ಕಿಡಿಕಾರಿದರು.
ಶ್ರೀರಂಗಪಟ್ಟಣದ ಗುಂಬಸ್‍ನಲ್ಲಿ ಪ್ರಚಾರ ಮಾಡುತ್ತಿದ್ದ ಸುಮಲತಾ, ಕಲ್ಲು ತೂರಾಟ, ದಬ್ಬಾಳಿಕೆ, ಅಹಂಕಾರದ ಮಾತುಗಳು ಅವರ ಕಡೆಯಿಂದಲೇ ಬರುತ್ತಿವೆ ಎಂದು ಕುಮಾರಸ್ವಾಮಿ ಆರೋಪಕ್ಕೆ ತಿರುಗೇಟು ನೀಡಿದರು.
ನಾವು ಹೋದ ಕಡೆಯಲೆಲ್ಲಾ ಜನರ ಪ್ರೀತಿಯ ಸ್ವಾಗತ ದೊರೆಯುತ್ತಿದೆ. ನಮ್ಮ ಕಡೆಯಿಂದ ಅಂತಹದ್ದು ಏನೂ ಆಗಿಲ್ಲ. ಒಂದು ವೇಳೆ ಇಂಟಿಲಿಜೆನ್ಸ್‍ನವರಿಂದ ತಿಳಿದುಕೊಳ್ಳಲಿ ಎಂದೂ ಅವರು ವ್ಯಂಗ್ಯವಾಡಿದರು.
ನಾನು ಮೈಸೂರಿನ ಸಂದೇಶ್ ಪ್ರಿನ್ಸ್ ಹೊಟೇಲ್‍ನಲ್ಲಿ ಉಳಿದುಕೊಂಡಿದ್ದೇನೆ. ಅವರು (ಕುಮಾರಸ್ವಾಮಿ) ಯಾವ ಹೊಟೇಲ್‍ನಲ್ಲಿ ಇದ್ದಾರೆ? ಅಲ್ಲಿ ಏನೇನು ನಡೀತಿದೆ ಅಂತ ಕೇಳಿದ್ದೆನೆಯೇ? ಸಿಎಂ ಆಗಿ ಜವಾಬ್ಧಾರಿ ಇದೆಯೇ? ಎಂದೂ ಅವರು ಪ್ರಶ್ನಿಸಿದರು.
ಮಾಧ್ಯಮ ಪ್ರತಿನಿಧಿಗಳ ಮೇಲೆ ಹಲ್ಲೆ ಆದರೆ ನಾನು ಜವಾಬ್ದಾರಿ ಅಲ್ಲ ಅಂತಿದ್ದಾರೆ. ಮೊದಲು ನಮ್ಮ ಬೆಂಬಲಿಗರಿಗೆ ಬೆದರಿಕೆ ಹಾಕಿದರು. ಈಗ ಮಾಧ್ಯಮಗಳಿಗೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಅವರು ಕಿಡಿಕಾರಿದರು.







