ಮೈಕ್ರೊ ವೀಕ್ಷಕರ ಹೊಣೆ ಮಹತ್ವದ್ದು- ರಾಜೀವ್ ರತನ್

ಮಂಗಳೂರು, ಎ.11: ದ.ಕ. ಜಿಲ್ಲೆಯಲ್ಲಿ 640 ಸೂಕ್ಷ್ಮ, ಅತೀಸೂಕ್ಷ್ಮ ಮತಗಟ್ಟೆಗಳನ್ನು ಗುರುತಿಸಲಾಗಿದ್ದು, ಇಲ್ಲಿ ಸಿಆರ್‌ಪಿಎಫ್ ವೆಬ್ ಕ್ಯಾಮರಾ ಮತ್ತು ಮೈಕ್ರೊ ವೀಕ್ಷಕರ ಪಾತ್ರ ಬಹುಮುಖ್ಯವಾಗಿದೆ ಎಂದು ಚುನಾವಣಾ ವೀಕ್ಷಕ ರಾಜೀವ ರತನ್ ಹೇಳಿದರು.
ನಗರದ ಪುರಭವನದಲ್ಲಿ ಗುರುವಾರ ನಡೆದ ತರಬೇತಿ ಶಿಬಿರದಲ್ಲಿ ಮಾತನಾಡಿದ ಅವರು, ಎಲ್ಲ ಮತಗಟ್ಟೆಗಳಲ್ಲಿ ಮೈಕ್ರೋ ವೀಕ್ಷಕರ ಮೇಲ್ವಿಚಾರಣೆಯಲ್ಲಿ ಮತದಾನ ನಡೆಯಲಿದೆ. 350 ಮೈಕ್ರೋ ವೀಕ್ಷಕರಿಗೆ ತರಬೇತಿ ನೀಡಲಾಗುತ್ತಿದೆ. ಮತದಾನ ಪ್ರಕ್ರಿಯೆಯಲ್ಲಿ ಯಾವುದೇ ರೀತಿಯ ಲೋಪಗಳು ಸಂಭವಿಸದಂತೆ ನೋಡಿಕೊಳ್ಳುವ ಹೊಣೆಗಾರಿಕೆ ಮೈಕ್ರೋ ವೀಕ್ಷಕರಿಗೆ ಇರುತ್ತದೆ ಎಂದರು.
ಮತಗಟ್ಟೆಯ ಬಳಿ ಅಹಿತಕರ ಘಟನೆಗಳು ನಡೆದರೆ, ಮತಯಂತ್ರಗಳಲ್ಲಿ ದೋಷ ಕಂಡುಬಂದರ ಕೈಗೊಳ್ಳಬೇಕಾದ ಕ್ರಮ, ಆಯೋಗ ರೂಪಿಸಿರುವ ನಿಯಮಗಳಿಗೆ ಅನುಗುಣವಾಗಿ ಚುನಾವಣೆ ನಡೆಯುತ್ತಿರುವ ಬಗ್ಗೆ ಪರಿಶೀಲನೆ ನಡೆಸಬೇಕು. ಮತದಾನ ನಡೆಯುವ ಹಿಂದಿನ ದಿನವೇ ಇತರ ಸಿಬ್ಬಂದಿ ಜತೆ ಮತಗಟ್ಟೆಯಲ್ಲಿರಬೇಕು ಎಂದು ಸೂಚನೆ ನೀಡಿದರು.
ಮತದಾನದ ದಿನ ಬೆಳಗ್ಗೆ 6ರಿಂದ ನಡೆಸುವ ಮಾಕ್‌ಪೋಲ್ ಪರಿಶೀಲಿಸಿ, ಖಚಿತಪಡಿಸಿಕೊಂಡು ಅಳಿಸಿ ಹಾಕಬೇಕು. ಮತಗಟ್ಟೆಯೊಳಗೆ ಅನಧಿಕೃತ ವ್ಯಕ್ತಿಗಳ ಪ್ರವೇಶಕ್ಕೆ ಅನುಮತಿ ನೀಡಬಾರದು. ನಿಗದಿತ ಸಂಖ್ಯೆಗಿಂತ ಹೆಚ್ಚಿನ ಸಂಖ್ಯೆಯು ಪೋಲಿಂಗ್ ಏಜೆಂಟರಿಗೆ ಅನುಮತಿ ನೀಡಬಾರದು ಎಂದು ಅಧಿಕಾರಿಗಳಿಗೆ ಎಚ್ಚರಿಸಿದ ಅವರು, ಏನಾದರೂ ತೊಂದರೆಯಾದರೆ ತಕ್ಷಣ ತಮ್ಮನ್ನು ಸಂಪರ್ಕಿಸುವಂತೆ ಸೂಚನೆ ನೀಡಿದರು.
ಮತದಾನದ ದಿನ ಮತದಾನದ ಪ್ರಮಾಣ, ಮತಯಂತ್ರದಲ್ಲಿನ ದೋಷಗಳು ಕಂಡುಬಂದರೆ ಮತಗಟ್ಟೆಗೆ ಭೇಟಿನೀಡಿದ ಸೆಕ್ಟರ್ ಅಧಿಕಾರಿ ಮತ್ತು ಪೊಲೀಸ್ ಅಧಿಕಾರಿಗಳ ವಿವರ, ಅನಧಿಕೃತ ವ್ಯಕ್ತಿಗಳು ಮತಗಟ್ಟೆ ಪ್ರವೇಶಿಸಿದ ವಿವರ, ಮತದಾನಕ್ಕೆ ಯಾವುದೇ ಅಡಚಣೆಯಾದರೆ ಮಾಹಿತಿ ನೀಡುವಂತೆ ನಿರ್ದೇಶನ ನೀಡಿದರು.
ಮೈಕ್ರೋ ವೀಕ್ಷಕರಿಗೆ ಇವಿಎಂ, ವಿವಿಪ್ಯಾಟ್‌ಗಳ ಕುರಿತು ಡಾ.ಜಾನ್ ಪಿಂಟೋ ಪ್ರಾತ್ಯಕ್ಷಿಕೆ ನೀಡಿದರು. ಅಪರ ಜಿಲ್ಲಾಧಿಕಾರಿ ಆರ್.ವೆಂಕಟಾಚಲಪತಿ, ಸಹಾಯಕ ಆಯುಕ್ತೆ ಪ್ರಮೀಳಾ, ಮಾಸ್ಟರ್ ಟ್ರೈನರ್ ಪ್ರದೀಪ್ ಡಿಸೋಜ ಉಪಸ್ಥಿತರಿದ್ದರು.







