ಎ.12ರಂದು ಮಂಗಳೂರು ವಿವಿ ವಾರ್ಷಿಕ ಘಟಿಕೋತ್ಸವ
ಮಂಗಳೂರು, ಎ.11: ಮಂಗಳೂರು ವಿಶ್ವವಿದ್ಯಾನಿಲಯದ 37ನೇ ವಾರ್ಷಿಕ ಘಟಿಕೋತ್ಸವವು ಎ.12ರಂದು ಮಧ್ಯಾಹ್ನ 3 ಗಂಟೆಗೆ ಕೋಣಾಜೆಯ ವಿವಿ ಆವರಣದ ಮಂಗಳ ಸಭಾಂಗಣದಲ್ಲಿ ನಡೆಯಲಿದೆ.
ಬರೋಡಾದ ಎಂ.ಎಸ್.ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಪದ್ಮಾ ರಾಮಚಂದ್ರನ್ ಘಟಿಕೋತ್ಸವಕ್ಕೆ ಮುಖ್ಯಅತಿಥಿಯಾಗಿ ಆಗಮಿಸಲಿದ್ದು, ರಾಜ್ಯಪಾಲ ಹಾಗೂ ವಿಶ್ವವಿದ್ಯಾನಿಲಯಗಳ ಕುಲಾಧಿಪತಿ ವಾಜುಭಾಯಿ ರೂಡಾಭಾಯಿ ವಾಲಾ ಘಟಿಕೋತ್ಸವದ ಅಧ್ಯಕ್ಷತೆ ವಹಿಸಿ, ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಿದ್ದಾರೆ.
ಘಟಿಕೋತ್ಸವದಲ್ಲಿ ಮಂಗಳೂರು ವಿವಿಯಿಂದ ಒಬ್ಬರಿಗೆ ಡಾಕ್ಟರೇಟ್ ಆಫ್ ಸೈನ್ಸ್ (ಬಯೋ ಟೆಕ್ನಾಲಜಿ), 149 ಮಂದಿಗೆ ಪಿಎಚ್‌ಡಿ ಡಾಕ್ಟರೇಟ್ ಪದವಿ (ಕಲೆ-27, ವಿಜ್ಞಾನ-99, ವಾಣಿಜ್ಯ-14, ಶಿಕ್ಷಣ-9). 34 ಮಂದಿಗೆ ಚಿನ್ನದ ಪದಕ ಮತ್ತು 98 ಮಂದಿಗೆ ನಗದು ಬಹುಮಾನ ನೀಡಲಾಗುವುದು.
29,110 ವಿದ್ಯಾರ್ಥಿಗಳು ಉತ್ತೀರ್ಣ: ಮಂಗಳೂರು ವಿಶ್ವವಿದ್ಯಾನಿಲಯವು 2017-18ನೇ ಸಾಲಿನಲ್ಲಿ ನಡೆಸಿದ ವಿವಿಧ ಪರೀಕ್ಷೆಗಳಿಗೆ ಒಟ್ಟು 42,742 ವಿದ್ಯಾರ್ಥಿಗಳು ಹಾಜರಾಗಿದ್ದು, 29,110 (ಶೇ.68.11) ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ಅದರಲ್ಲಿ ಸ್ನಾತಕೋತ್ತರ ಪದವಿ ಪರೀಕ್ಷೆಗೆ 7,052 ವಿದ್ಯಾರ್ಥಿಗಳು ಹಾಜರಾಗಿದ್ದು, 6,642 (ಶೇ.94.19) ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಪದವಿ ಪರೀಕ್ಷಗೆ 35,511 ವಿದ್ಯಾರ್ಥಿಗಳು ಹಾಜರಾಗಿದ್ದು, 22,295 (ಶೇ.62.78) ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಸ್ನಾತಕೋತ್ತರ ಡಿಪ್ಲೋಮಾ ಪರೀಕ್ಷೆಗೆ ಹಾಜರಾದ 29 ವಿದ್ಯಾರ್ಥಿಗಳಲ್ಲಿ 23 (ಶೇ.69.78) ವಿದ್ಯಾರ್ಥಿಗಳು ಉತ್ತೀರ್ಣಗೊಂಡಿದ್ದಾರೆ ಎಂದು ಮಂಗಳೂರು ವಿವಿ ಕುಲಸಚಿವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.







