ಋತುಸ್ರಾವದ ಸ್ತ್ರೀಯರಿಗೆ ದೇಗುಲ ಪ್ರವೇಶ ನಿಷೇಧ ಸಮರ್ಥಿಸಿದ ಪಾರ್ಸಿ ಟ್ರಸ್ಟ್

ಹೊಸದಿಲ್ಲಿ, ಎ.11: ಸ್ತ್ರೀಯರಿಗೆ ಋತುಸ್ರಾವದ ಸಮಯದಲ್ಲಿ ದೇಗುಲಕ್ಕ್ಕೆ ಪ್ರವೇಶವನ್ನು ನಿಷೇಧಿಸುವ ತನ್ನ ಸಂಪ್ರದಾಯವನ್ನು ದಿಲ್ಲಿಯ ಪಾರ್ಸಿ ಸಮುದಾಯಕ್ಕೆ ಸೇರಿದ, ಅಗ್ನಿಪೂಜಕ ದೇವಾಲಯದ ಟ್ರಸ್ಟ್ ಸಮರ್ಥಿಸಿಕೊಂಡಿದೆ. ಋತುಸ್ರಾವದ ಸ್ತ್ರೀಯರಿಗೆ ದೇವಾಲಯ ಪ್ರವೇಶ ನಿಷೇಧಿಸುವ ಕ್ರಮವು ಲಿಂಗತಾರತಮ್ಯವನ್ನು ಪ್ರತಿಪಾದಿಸುವುದಿಲ್ಲ. ದೇಹದಲ್ಲಾದ ಗಾಯದಿಂದ ರಕ್ತ ಸೋರುವ ಪುರುಷರಿಗೂ ಕೂಡಾ ದೇಗುಲದೊಳಗೆ ಪ್ರವೇಶಾವಕಾಶವನ್ನು ತಾನು ನೀಡುವುದಿಲ್ಲವೆಂದು ಟ್ರಸ್ಟ್ ದಿಲ್ಲಿ ಹೈಕೋರ್ಟ್‌ಗೆ ಗುರುವಾರ ತಿಳಿಸಿದೆ.
ದಿಲ್ಲಿ ಗೇಟ್ ಸಮೀಪದ ಅಗ್ನಿದೇವಾಲಯವು ಪಾರ್ಸಿ ಸಮುದಾಯದ ಖಾಸಗಿ ನೆರವಿನಿಂದ ನಡೆಯುತ್ತಿದೆ. ಹೀಗಾಗಿ, ಋತುಸ್ರಾವದ ಸ್ತ್ರೀಯರಿಗೆ ದೇವಾಲ ಯದೊಳಗೆ ಪ್ರವೇಶವನ್ನು ಆಗ್ರಹಿಸುವುದಕ್ಕೆ ಯಾರಿಗೂ ಹಕ್ಕಿಲ್ಲವೆಂದು ದಿಲ್ಲಿ ಪಾರ್ಸಿ ಅಂಜುಮಾನ್ ಸಂಸ್ಥೆಯು, ಮುಖ್ಯ ನ್ಯಾಯಮೂರ್ತಿ ರಾಜೇಂದ್ರ ಮೆನನ್ ಹಾಗೂ ಎ.ಜೆ.ಭಾಮ್‌ಬಾನಿ ಅವರನ್ನೊಳಗೊಂಡ ನ್ಯಾಯಪೀಠಕ್ಕೆ ತಿಳಿಸಿದೆ.
ದಿಲ್ಲಿಯಲ್ಲಿರುವ ಪಾರ್ಸಿ ದೇಗುಲಕ್ಕೆ ಇತರ ಜನಾಂಗಗಳು ಹಾಗೂ ಧರ್ಮಗಳಿಗೆ ಸೇರಿದವರಿಗೆ ಪ್ರವೇಶ ನಿಷೇಧಿಸಿರುವುದನ್ನು ಪ್ರಶ್ನಿಸಿ ನ್ಯಾಯವಾದಿ ಸಂಜೀವ್ ಕುಮಾರ್ ದಿಲ್ಲಿ ಹೈಕೋರ್ಟ್ ಮೆಟ್ಟಲೇರಿದ್ದರು. ದೇವಾಲಯದ ಗರ್ಭಗುಡಿಯ ಸಮೀಪಕ್ಕೆ ಋತುಸ್ರಾವದ ಮಹಿಳೆಯರಿಗೂ ಪ್ರವೇಶಕ್ಕೆ ಅವಕಾಶ ಒದಗಿಸ ಬೇಕೆಂದು ಅವರು ನ್ಯಾಯಾಲಯವನ್ನು ಕೋರಿದ್ದರು. ಪಾರ್ಸಿ ಧರ್ಮದ ಮಹಿಳೆಯರನ್ನು ಅರ್ಚಕಿಯರಾಗಿ ನೇಮಿಸುವಂತೆಯೂ ಅವರು ಪಿಐಎಲ್‌ನಲ್ಲಿ ಆಗ್ರಹಿಸಿದ್ದರು.







