ಪೌರತ್ವ ತಿದ್ದುಪಡಿ ಕಾಯ್ದೆಗೆ ಅವಕಾಶ ನೀಡಲ್ಲ: ಪಕ್ಷದ ಆಶ್ವಾಸನೆ ವಿರುದ್ಧ ಬಿಜೆಪಿ ಅಭ್ಯರ್ಥಿಯ ಆಕ್ರೋಶ

ಶಿಲ್ಲಾಂಗ್, ಎ.12: “ಮೇಘಾಲಯ ಮತ್ತು ಈಶಾನ್ಯ ರಾಜ್ಯಗಳಲ್ಲಿ ಪೌರತ್ವ (ತಿದ್ದುಪಡಿ) ಮಸೂದೆ ಜಾರಿಗೆ ಅವಕಾಶ ನೀಡುವ ಬದಲು ನನ್ನನ್ನು ನಾನೇ ಹತ್ಯೆ ಮಾಡಿಕೊಳ್ಳುತ್ತೇನೆ” ಎಂದು ಶಿಲ್ಲಾಂಗ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶಂಬೋರ್ ಶುಲ್ಲೈ ಘೋಷಿಸಿದ್ದಾರೆ. ಈ ಮೂಲಕ ಪೌರತ್ವ ತಿದ್ದುಪಡಿ ಮಸೂದೆ ಜಾರಿಗೆ ಮುಂದಾಗಿರುವ ಮೋದಿ ಸರ್ಕಾರಕ್ಕೇ ಸವಾಲು ಹಾಕಿದ್ದಾರೆ.
"ಶಂಬೋರ್ ಶುಲ್ಲೈ ಇರುವವರೆಗೂ ಪೌರತ್ವ ತಿದ್ದುಪಡಿ ಮಸೂದೆ ಜಾರಿ ಸಾಧ್ಯವಿಲ್ಲ. ನಾನು ನನ್ನನ್ನೇ ಕೊಲ್ಲುತ್ತೇನೆ. ಮೇಘಾಲಯ ಮತ್ತು ಈಶಾನ್ಯ ರಾಜ್ಯಗಳಲ್ಲಿ ಈ ಮಸೂದೆ ಜಾರಿಗೆ ಅವಕಾಶ ನೀಡುವ ಬದಲು ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ" ಎಂದು ನಿನ್ನೆ ನಡೆದ ಮೊದಲ ಹಂತದ ಮತದಾನದಲ್ಲಿ ಮತ ಚಲಾಯಿಸಿದ ಬಳಿಕ ಮಾತನಾಡುತ್ತಾ ಸ್ಪಷ್ಟಪಡಿಸಿದರು.
ಈ ಮಸೂದೆಯನ್ನು ಭಾರತದ ಇತರ ರಾಜ್ಯಗಳಲ್ಲಿ ಅನುಷ್ಠಾನಕ್ಕೆ ತಂದರೆ ಅಭ್ಯಂತರವೇನೂ ಇಲ್ಲ ಎಂದು ಹೇಳಿದರು. "ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಕೇಂದ್ರ ನಾಯಕರಿಗೆ ಮತ್ತು ಸರ್ಕಾರೇತರ ಸಂಸ್ಥೆಗಳಿಗೆ ಈ ಹಿಂದೆ ಮನವಿ ಸಲ್ಲಿಸಿ, ಈಶಾನ್ಯ ರಾಜ್ಯಗಳನ್ನು ಈ ಉದ್ದೇಶಿತ ಕಾಯ್ದೆಯ ವ್ಯಾಪ್ತಿಯಿಂದ ಹೊರಗಿಡಬೇಕು ಎಂದು ಆಗ್ರಹಿಸಿದ್ದೇನೆ. ಇದಕ್ಕೆ ತಿದ್ದುಪಡಿ ತರಲೇಬೇಕು" ಎಂದು ಒತ್ತಾಯಿಸಿದರು.
ಕೇಂದ್ರದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬಂದರೆ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೊಳಿಸುವುದಾಗಿ ಬಿಜೆಪಿ ಪ್ರಣಾಳಿಕೆಯಲ್ಲಿ ಆಶ್ವಾಸನೆ ನೀಡಲಾಗಿದೆ.







