ಮಣಿಪಾಲ ಪೊಕ್ಸೋ ಪ್ರಕರಣ: ಆರೋಪಿಗೆ ಕಠಿಣ ಕಾರಾಗೃಹ ಶಿಕ್ಷೆ
ಉಡುಪಿ ಜಿಲ್ಲಾ ವಿಶೇಷ ನ್ಯಾಯಾಲಯದಿಂದ ಶಿಕ್ಷೆಯ ಪ್ರಮಾಣ ಪ್ರಕಟ

ಅರುಣ್ ಆಚಾರಿ
ಉಡುಪಿ, ಎ.12: ಮಣಿಪಾಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಎರಡು ವರ್ಷಗಳ ಹಿಂದೆ ಅಪ್ರಾಪ್ತ ವಯಸ್ಸಿನ ಬುದ್ಧಿಮಾಂಧ್ಯ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಪ್ರಕರಣದ ಪೋಕ್ಸೋ ಆರೋಪಿ ಪೆರಂಪಳ್ಳಿಯ ಅರುಣ್ ಆಚಾರಿ (32) ಎಂಬಾತನಿಗೆ ಉಡುಪಿ ಜಿಲ್ಲಾ ವಿಶೇಷ ನ್ಯಾಯಾಲಯ ಇಂದು ಕಠಿಣ ಕಾರಾಗೃಹ ಶಿಕ್ಷೆಯನ್ನು ಪ್ರಕಟಿಸಿ ಆದೇಶ ನೀಡಿದೆ.
ತನ್ನ ಸಹೋದ್ಯೋಗಿಯ 15 ವರ್ಷ ಪ್ರಾಯದ ಮಗಳನ್ನು ಮದುವೆಯಾಗುವ ಆಸೆ ತೋರಿಸಿ 2016ರ ಜು.16ರಂದು ಬೈಕಿನಲ್ಲಿ ಅಪಹರಿಸಿದ ಅರುಣ್ ಆಚಾರಿ, ಪೆರಂಪಳ್ಳಿಯಲ್ಲಿರುವ ತನ್ನ ಮನೆಯಲ್ಲಿ ಅತ್ಯಾಚಾರ ಎಸಗಿದ್ದನು. ಈ ಬಗ್ಗೆ ಮಣಿಪಾಲ ಠಾಣೆಯಲ್ಲಿ ಪೊಕ್ಸೋ ಕಾಯಿದೆಯಡಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖೆ ಆಗಿನ ಮಣಿಪಾಲ ಪೊಲೀಸ್ ನಿರೀಕ್ಷಕ ಗಿರೀಶ್ ನಡೆಸಿದ್ದು, ನಿರೀಕ್ಷಕ ಸಂಪತ್ ಕುಮಾರ್ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ಜಿಲ್ಲಾ ವಿಶೇಷ ನ್ಯಾಯಾಧೀಶ ಚಂದ್ರ ಶೇಖರ್ ಎಂ.ಜೋಶಿ ಆರೋಪಿ ಮೇಲಿನ ಆರೋಪ ಸಾಬೀತಾಗಿದೆ ಎಂದು ಅಭಿಪ್ರಾಯಪಟ್ಟು ಆತನನ್ನು ದೋಷಿ ಎಂಬುದಾಗಿ ಎ.10ರಂದು ತೀರ್ಪು ನೀಡಿ, ಶಿಕ್ಷೆಯ ಪ್ರಮಾಣವನ್ನು ಎ.12ರಂದು ಪ್ರಕಟಿಸುವುದಾಗಿ ಆದೇಶಿಸಿದ್ದರು.
ಅದರಂತೆ ನ್ಯಾಯಾಧೀಶರು ಇಂದು ಆರೋಪಿಗೆ ಐಪಿಸಿ ಕಲಂ 366 (ಅಪಹರಣ)ರಡಿ ಏಳು ವರ್ಷ ಜೈಲುಶಿಕ್ಷೆ 30 ಸಾವಿರ ರೂ. ದಂಡ (ದಂಡ ಪಾವತಿಸದಿದ್ದಲ್ಲಿ 6 ತಿಂಗಳು ಹೆಚ್ಚುವರಿ ಜೈಲುಶಿಕ್ಷೆ), 376 (ಅತ್ಯಾಚಾರ)ರಡಿ 10ವರ್ಷ ಜೈಲುಶಿಕ್ಷೆ 30ಸಾವಿರ ರೂ. ದಂಡ (ತಪ್ಪಿದಲ್ಲಿ 6 ತಿಂಗಳು ಹೆಚ್ಚುವರಿ ಜೈಲುಶಿಕ್ಷೆ), ಕಲಂ 6 ಪೋಕ್ಸೊ ಕಾಯಿದೆಯಡಿ 10 ವರ್ಷ ಜೈಲು ಶಿಕ್ಷೆ, 50 ಸಾವಿರ ರೂ. ದಂಡ(ತಪ್ಪಿದಲ್ಲಿ 8ತಿಂಗಳು ಹೆಚ್ಚುವರಿ ಜೈಲುಶಿಕ್ಷೆ) ವಿಧಿಸಿ ಆದೇಶ ನೀಡಿದರು.
ಆರೋಪಿಯು ಎರಡು ಪ್ರಕರಣದ ತಲಾ 10 ವರ್ಷವನ್ನು ಒಂದೇ ಬಾರಿಗೆ ಮತ್ತು 10ವರ್ಷ ಜೈಲು ಶಿಕ್ಷೆಯ ನಂತರ ಪ್ರತ್ಯೇಕವಾಗಿ ಮತ್ತೆ ಏಳು ವರ್ಷ ಜೈಲು ಶಿಕ್ಷೆ ಅನುಭವಿಸುವಂತೆ ನ್ಯಾಯಾಧೀಶರು ಆದೇಶದಲ್ಲಿ ತಿಳಿಸಿದ್ದಾರೆ.
ದಂಡದ ಒಟ್ಟು ಮೊತ್ತದಲ್ಲಿ ಒಂದು ಲಕ್ಷ ರೂ.ವನ್ನು ಸಂತ್ರಸ್ತ ಬಾಲಕಿಗೆ ನೀಡುವಂತೆ ನ್ಯಾಯಾಧೀಶರು ಆದೇಶ ನೀಡಿದ್ದಾರೆ. ಅಭಿಯೋಜನೆ ಪರವಾಗಿ ಜಿಲ್ಲಾ ವಿಶೇಷ ಸರಕಾರಿ ಅಭಿಯೋಜಕ ವಿಜಯ ವಾಸು ಪೂಜಾರಿ ವಾದ ಮಂಡಿಸಿದ್ದರು.







